ADVERTISEMENT

ಕಟ್ಟಡ ತೆರವು: ಜೆಸಿಬಿ ಸದ್ದು

ಅಂಗಡಿ-ಮುಂಗಟ್ಟು ಬಂದ್, ವ್ಯಾಪಾರಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 12:09 IST
Last Updated 22 ಜೂನ್ 2013, 12:09 IST

ರಾಯಚೂರು: ನಗರದ ಹೃದಯ ಭಾಗದವಾದ ಮಾರುಕಟ್ಟೆ ಪ್ರದೇಶ ಸ್ವಚ್ಛತೆ ಹಾಗೂ ರಸ್ತೆ ಜಾಗ ಅತಿಕ್ರಮಿಸಿದ ಕಟ್ಟಡ ತೆರವು ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಗಳೂ ಆದ ಎಸ್.ಎನ್ ನಾಗರಾಜ ಅವರು ಶುಕ್ರವಾರ ನಗರದ ಮಾರುಕಟ್ಟೆ ಪ್ರದೇಶದ ಪ್ರಮುಖ ವ್ಯಾಪಾರಿ ಸ್ಥಳವಾದ ಬಟ್ಟೆ ಬಜಾರಕ್ಕೆ ಜೆಸಿಬಿಯೊಂದಿಗೆ ದಾಳಿ ನಡೆಸಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರಸಭೆ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿ ವರ್ಗದವರು ಆನೆ ಗಾತ್ರದ ಅಬ್ಬರಿಸುವ ಜೆಸಿಗಳಿಂದ ಕಟ್ಟಡ ತೆರವು ಮತ್ತು ಅಂಗಡಿ ಮುಂಗಟ್ಟುಗಳ ಬೋರ್ಡ್ ತೆರವಿಗೆ ಮುಂದಾದರು.

ಈವರೆಗೆ ಬರೀ ಕಸ ತೆರವು, ಸ್ವಚ್ಛತೆ, ಸಣ್ಣ ಪುಟ್ಟ ಅಂಗಡಿ ತೆರವು ಮಾಡಿದ್ದ ಜಿಲ್ಲಾಧಿಕಾರಿ ನೇತೃತ್ವದ ತಂಡವು ಶುಕ್ರವಾರ ಹಠಾತ್ತಾಗಿ ಅಂಗಡಿ ಮುಂದಿನ ಬೋರ್ಡ್, ಕಟ್ಟಡ ತೆರವಿಗೆ ಮುಂದಾಗಿದ್ದು ವ್ಯಾಪಾರಸ್ಥರು ಹಾಗೂ ರಸ್ತೆ ಅತಿಕ್ರಮಿಸಿ ಕಟ್ಟಡ ನಿರ್ಮಿಸಿದವರನ್ನು ಕೆರಳಿಸಿತು.

ಕಾರ್ಯಾಚರಣೆಗಿಳಿದ ಜೆಸಿಬಿ ತಡೆಯಲು ಮುಂದಾದರು. ನಗರಸಭೆ ಎಂಜಿನಿಯರ್‌ಗೆ ಆಕ್ಷೇಪ ಮಾಡಿ ಕಟ್ಟಡ ತೆರವು ಮಾಡದಂತೆ ಕೂಗಾಡಿದರು. ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜ ಅವರೊಂದಿಗೂ ವಾಗ್ವಾದ ನಡೆಸಿ ತಮ್ಮ ಆಕ್ರೋಷ  ಹೊರ ಹಾಕಿದರು.

ಒಂದು ಕಡೆ ರಸ್ತೆ ಅತಿಕ್ರಮಿಸಿದ ಕಟ್ಟಡಗಳನ್ನು, ಬೋರ್ಡ್‌ಗಳನ್ನು ಜೆಸಿಬಿಗಳು ಉರುಳಿಸುತ್ತಿದ್ದರೆ ಮತ್ತೊಂದು ಕಡೆ ವ್ಯಾಪಾರಸ್ಥರ ಆಕ್ರೋಶ ದುಪ್ಪಟಾಗಿತ್ತು. ಬಿಗಿ ಪೊಲೀಸ್ ಬಂದೋ ಬಸ್ತ್ ಇದ್ದಾಗ್ಯೂ ಕಾರ್ಯಾಚರಣೆಗೆ ಕಿರಿ ಕಿರಿ ಮಾಡಿದವರಿಗೆ ಪೊಲೀಸರು, ಮಫ್ತಿ ಪೊಲೀಸರು ಲಘು ಲಾಠಿ ರುಚಿ ತೋರಿಸಿ ಹಿಮ್ಮೆಟ್ಟಿಸಿದರು. ಕೊನೆಗೆ ವ್ಯಾಪಾರಸ್ಥರು ತಮ್ಮ ಆಕ್ರೋಷದ ಪ್ರತೀಕವಾಗಿ ಬಟ್ಟೆ ಬಜಾರದ ಎಲ್ಲ ಅಂಗಡಿ ಮುಂಗಟ್ಟುಗಳಿಗೆ ಬೀಗ ಹಾಕಿದರು. ತಮ್ಮ ಸಮಸ್ಯೆ ತೋಡಿಕೊಂಡರು.

ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಎದುರಿಗೆ ಇರುವ ರಸ್ತೆ ಪಕ್ಕದ ತಾತ್ಕಾಲಿಕ ಮತ್ತು ಕಾಯಂ ಕಟ್ಟಡಗಳನ್ನು `ಅತಿಕ್ರಮಣವಾಗಿದೆ' ಎಂಬ ಹಿನ್ನೆಲೆಯಲ್ಲಿ ತೆರವು ಮಾಡಲಾಯಿತು. ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದ ಗಣೇಶ ಕಟ್ಟೆಯನ್ನೂ ತೆರವು ಮಾಡಿದ್ದು, ನಿವಾಸಿಗಳಿಗೆ ಸಿಟ್ಟು ತರಿಸುವಂತೆ ಮಾಡಿತು.

ಅತಿಕ್ರಮಣ ಕಟ್ಟಡದವರಿಗೆ, ವ್ಯಾಪಾರಸ್ಥರಿಗೆ ಈಗಾಗಲೇ ತೆರವಿಗೆ ಸೂಚನೆ ನೀಡಿದ್ದರೂ ತೆರವುಗೊಳಿಸಿಲ್ಲ. ಹೀಗಾಗಿ ತೆರವು ಮಾಡಲಾಗುತ್ತಿದೆ. ಸ್ವಚ್ಛತೆ ಮತ್ತು ರಸ್ತೆ ಅಗಲೀಕರಣ, ಅಭಿವೃದ್ಧಿ ದೃಷ್ಟಿಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ನಾಗರಾಜ ಅವರು ಸ್ಪಷ್ಟಪಡಿಸಿದರು.

ಕಟ್ಟಡ ತೆರವು ಮಾಡಿದ ಬಳಿಕ ಅವಶೇಷಗಳನ್ನು ಇದೇ ಸಾಗಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕೆಲ ವ್ಯಾಪಾರಸ್ಥರು ನಾಳೆ ಸಂಜೆಯೊಳಗೆ ತಮ್ಮ ಕಟ್ಟಡ ತೆರವನ್ನು ತಾವೇ ಮಾಡಿಕೊಳ್ಳುವುದಾಗಿ ಸಮಯ ಕೇಳುತ್ತಿದ್ದುದು ಕಂಡು ಬಂತು.

ನಗರಸಭೆ ಎಇಇ ವೆಂಕಟೇಶ, ಸದರ ಬಜಾರ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ, ಪಿಎಸ್‌ಐ ದಯಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.