ADVERTISEMENT

ಕರವೇಯಿಂದ ಸಚಿವರಿಗೆ ಘೆರಾವ್

ಸಂಜೆ ವೇಳೆಗೆ ವರದಿ ಸಲ್ಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 11:07 IST
Last Updated 18 ಜೂನ್ 2013, 11:07 IST

ಲಿಂಗಸುಗೂರ: ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಗಳು ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಆರೂವರೆ ದಶಕಗಳ ಅವಧಿಯಲ್ಲಿ ಸಾವಿರಾರು ಕೋಟಿ ಹಣ ತಾಲ್ಲೂಕಿನಲ್ಲಿ ಖರ್ಚಾಗಿದ್ದರು ಕೂಡ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾದ ಸರ್ಕಾರದ ಕಾರ್ಯವೈಖರಿ ವಿರೋಧಿಸಿ ಸೋಮವಾರ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಕರವೇ ಕಾರ್ಯಕರ್ತರು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ವಾಹನಕ್ಕೆ ಘೆರಾವ್ ಹಾಕಿ ಪ್ರತಿಭಟನೆ ನಡೆಸಿದರು.

ವಾಹನದಿಂದ ಕೆಳಗಿಳಿದ ಸಚಿವ ಎಚ್.ಕೆ ಪಾಟೀಲರು ಪ್ರತಿಭಟನಾಕಾರರ ಬಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದರು. ತಾಲ್ಲೂಕಿನಾದ್ಯಂತ 16 ಗ್ರಾಮಗಳು ಅರ್ಸೆನಿಕ್, 111 ಗ್ರಾಮಗಳು ಫ್ಲೋರೈಡ್ ಹಾಗೂ ಇತರೆ ಗ್ರಾಮಗಳು ಕೂಡ ಇತರೆ ವಿಷಯುಕ್ತ ಅಂಶಗಳಿಂದ ಕೂಡಿದ ಕುಡಿಯುವ ನೀರು ಸೇವನೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕುಡಿಯುವ ನೀರಿನ ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ. ಆದರೆ ಬಹುತೇಕ ಗ್ರಾಮಗಳು ಅಂತಹ ಯೋಜನೆಗಳಡಿ ನೀರು ಪಡೆಯುವಲ್ಲಿ ವಿಫಲವಾಗಿವೆ ಎಂದು ಹೊನ್ನಳ್ಳಿ ಕುಡಿಯುವ ನೀರಿನ ಯೋಜನೆ ಕರ್ಮಕಾಂಡ ಬಿಚ್ಚಿಟ್ಟರು.

ಕಳೆದ ದಶಕಗಳ ಹಿಂದೆ ಕೋಟ್ಯಂತರ ಹಣ ಖರ್ಚು ಮಾಡಿ 7 ಗ್ರಾಮಗಳಿಗೆ ಕಾಲುವೆ ನೀರನ್ನು ಶುದ್ಧೀಕರಿಸಿ ಪೂರೈಸುವ ಯೋಜನೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಈ ಯೋಜನೆಯ ಯಲಗಲದಿನ್ನಿ, ಚಿಕ್ಕಹೆಸರೂರ ಗ್ರಾಮಗಳಿಗೆ ಇಂದಿಗೂ ಹನಿ ನೀರು ಹರಿದಿಲ್ಲ. ಐದು ಗ್ರಾಮಗಳಿಗೆ ಪೂರೈಸುತ್ತಿರುವ ನೀರು ಕಲುಷಿತವಾಗಿವೆ. ಜಲಶುದ್ಧೀಕರಣ ಮಾಡುತ್ತಿಲ್ಲ ಎಂದು ಕಲುಷಿತ ನೀರಿನ ಶ್ಯಾಂಪಲ್ ಬಾಟಲಿಯಲ್ಲಿ ಸಂಗ್ರಹಿಸಿ ಸಚಿವರಿಗೆ ನೀರನ್ನು ಪರೀಕ್ಷೆ ಮಾಡಿಸುವಂತೆ ಕೆಲ ಸಮಯ ಪಟ್ಟು ಹಿಡಿದು ಕುಳಿತರು.

ವಾಸ್ತವ ಸಮಸ್ಯೆ ಅರಿತ ಸಚಿವರು ಸ್ಥಳದಲ್ಲಿಯೆ ಇದ್ದ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್ ಅವರನ್ನು ಕರೆದು ಬಾಟಲಿಯಲ್ಲಿನ ನೀರನ್ನು ತೋರಿಸಿ ತರಾಟೆಗೆ ತೆಗೆದುಕೊಂಡರು. ತಾವು ತಮ್ಮ ಜೊತೆಗೆ ಬರುವ ಅವಶ್ಯಕತೆ ಇಲ್ಲ. ಇಂದು ಸಂಜೆ ಒಳಗಾಗಿ ಯೋಜನೆ ರೂಪರೇಷ, ಆಗಿರುವ ಕಾಮಗಾರಿ ಸೇರಿದಂತೆ ಒಟ್ಟಾರೆ ವೈಫಲ್ಯತೆಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿ ಕರವೇ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಪರಿಶೀಲಿಸಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ. ಮುಖಂಡರಾದ ಅಜೀಜಪಾಷ, ಶಿವರಾಜ ನಾಯಕ, ಆಂಜನೇಯ ಭಂಡಾರಿ, ಸದ್ದಾಂಹುಸೇನ, ಬಿ.ಎಸ್. ನಾಯಕ, ತಿಮ್ಮಾರೆಡ್ಡಿ, ಚಂದ್ರು ನಾಯಕ, ನಿತ್ಯಾನಂದ, ರಾಘು, ಚೇತನ ಗುತ್ತೆದಾರ, ರವಿಕುಮಾರ ಬರಗುಡಿ, ಕಂಠೆಪ್ಪ, ಅಮರೇಶ, ಭಗೀರಥ, ನಿಜಗುಣಿ, ತಿಪ್ಪಣ್ಣ, ರಮೇಶ, ವೆಂಕಟೇಶ, ದ್ಯಾಮಣ್ಣ, ಹನುಮೇಶ, ಬಸವರಾಜ, ಪರಶುರಾಮ ಸೇರಿದಂತೆ ಇತರೆ ಯುವಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.