ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಹಾಗೂ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ರಾಂಪುರ ಗ್ರಾಮದ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಆರಂಭಗೊಂಡಿದ್ದು, ರೈತ ಸಂಘಟನೆ ಮುಖಂಡರು ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳದಲ್ಲಿಯೇ ಜಲಸಂಪನ್ಮೂಲ ಖಾತೆ ಸಚಿವರೊಂದಿಗೆ ಮಾತನಾಡಿ ಸಮರ್ಪಕ ರೀತಿ ಕಾಮಗಾರಿ ನಡೆಯದಿರುವ ಬಗ್ಗೆ ಹೇಳಿದರು.
ಅಸಮರ್ಪಕ ಕಾಮಗಾರಿ: ತುಂಗಭದ್ರಾ ಎಡದಂಡೆ ಕಾಲುವೆ ಸುಮಾರು 6 ಲಕ್ಷ ಹೆಕ್ಟೇರ್ ಜಮೀನಿಗೆ ನೀರು ಉಣಿಸುವ ಕಾಲುವೆ. ಈ ಭಾಗದ ರೈತರ ಜೀವಾಳವೇ ಆಗಿದೆ. ಈ ಕಾಲುವೆ ಆಧುನೀಕರಣಕ್ಕೆ 420 ಕೋಟಿ ಮಂಜೂರು ಮಾಡಿದ್ದು ಕಾಮಗಾರಿ ನಡೆದಿದೆ. ಆದರೆ, ಇಲ್ಲಿ ನಡೆದಿರುವ ಕಾಮಗಾರಿ ಅಸಮರ್ಪಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಲುವೆ ಆಧುನೀಕರಣ ಕಾಮಗಾರಿ ಪದೇ ಪದೇ ಮಾಡುವಂಥದ್ದಲ್ಲ. ಕಾಮಗಾರಿ ನಡೆಯುವ ಸ್ಥಳದಲ್ಲಿ ಎಂಜಿನಿಯರ್‌ಗಳು ಕಡ್ಡಾಯವಾಗಿ ಇರಬೇಕು. ಸರ್ಕಾರದ ಅಧಿಕಾರಿಗಳು ಕಾಮಗಾರಿ ಪ್ರತಿ ಹಂತ ಗುಣಮಟ್ಟ ಪರೀಕ್ಷಿಸಬೇಕು. ಇದ್ಯಾವುದು ಆಗುತ್ತಿಲ್ಲ.
ಎಂಜಿನಿಯರ್‌ಗಳೇ ಇಲ್ಲಿ ಕಾಣುತ್ತಿಲ್ಲ. ಕಾಂಕ್ರೀಟ್ 4 ಇಂಚು ದಪ್ಪ ಹಾಕಬೇಕು. ಮೂರುವರೆ ಇಂಚು ಹಾಕಲಾಗುತ್ತಿದೆ. ಒಣ ಮಣ್ಣು ಹಾಕಿ ಅದರ ಮೇಲೆ ಕಾಂಕ್ರೀಟ್ ಮಾಡುತ್ತಿರ‌್ದುವುದು ಅವೈಜ್ಞಾನಿಕ ಪದ್ಧತಿ. ಮಣ್ಣಿಗೆ ನೀರು ಹೊಯ್ಯಬೇಕು. ಅದು ಗಟ್ಟಿಯಾದ ಬಳಿಕ ಮೇಲೆ ಕಾಂಕ್ರೀಟ್ ಹಾಕಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.