ADVERTISEMENT

ಕಾಳುಕಟ್ಟದ ಜೋಳ: ಸಂಕಷ್ಟದಲ್ಲಿ ರೈತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 9:10 IST
Last Updated 14 ಫೆಬ್ರುವರಿ 2011, 9:10 IST

ಲಿಂಗಸುಗೂರ: ತಾಲ್ಲೂಕಿನ ಜಹಗೀರನಂದಿಹಾಳ ಗ್ರಾಮದ ಕೆಲ ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿಕೊಂಡ ಬಿಳಿಜೋಳ ಉತ್ತಮ ಬೆಳೆ ಬಂದಿದೆ. ಆದರೆ, ನಿರ್ಮಲ ತಳಿ ಬೀಜ ಬಿತ್ತನೆ ಮಾಡಿಕೊಂಡ ರೈತರ ಜಮೀನುಗಳಲ್ಲಿ ಆಳೆತ್ತರ ಬೆಳೆದು ನಿಂತ ಬೆಳೆ ಕಾಳುಕಟ್ಟದೆ ಹೋಗಿದ್ದರಿಂದ ಕೆಲ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತ ಮುಖಂಡ ಶಿವಪುತ್ರಗೌಡ ಆರೋಪಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಇದೇ ಗ್ರಾಮದ ನೂರಾರು ರೈತರು ವೈವಿಧ್ಯಮಯ ತಳಿಯ ಬಿಳಿಜೋಳದ ಪಾಕೆಟ್‌ಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬಹುತೇಕ ರೈತರ ಜಮೀನುಗಳ ಬಿಳಿಜೋಳದ ಫಸಲು ಫಲವತ್ತಾಗಿದೆ. ಆದರೆ ನಿರ್ಮಲ ತಳಿ ಬೀಜ ಬಿತ್ತನೆ ಮಾಡಿದವರ ಜಮೀನುಗಳಲ್ಲಿ ಮಾತ್ರ ತೆನೆ ಬಿಡದೆ ಬಚ್ಚಾಗಿ ನಿಂತಿರುವುದು ಕಾಣಸಿಗುತ್ತದೆ.
ಜಹಗೀರನಂದಿಹಾಳ ಗ್ರಾಮದ ಶಿವಪುತ್ರಗೌಡ, ಗದ್ದೆನಗೌಡ, ಸಿದ್ಧಪ್ಪ ಮತ್ತಿತರರ 25ಕ್ಕೂ ಹೆಚ್ಚು ಎಕರೆ ಜಮೀನುಗಳಲ್ಲಿ ನಿರ್ಮಲ ತಳಿಯ ಬಿಳಿಜೋಳದ ದಂಟು ಅಬ್ಬರದಿಂದ ಬೆಳೆದಿದೆ. ಶೇ 10ರಷ್ಟು ಮಾತ್ರ ತೆನೆ ಕಾಣಿಸಿಕೊಂಡಿದೆ. ಅದು ಕೂಡ ಕಾಳುಕಟ್ಟದೆ ತೆನೆ ಬಚ್ಚಾಗಿ ತಲೆಬಾಗಿ ನಿಂತಿದೆ. ಉಳಿದ ಶೇ 90ರಷ್ಟು ಅಬ್ಬರ ಬೆಳೆ ತೆನೆ ಬಿಡದಿರುವುದು ಕಳಪೆ ಬೀಜವೆ ಕಾರಣ ಎಂಬುದು ರೈತರ ಆರೋಪವಾಗಿದೆ.

ಈ ಕುರಿತಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬೆಳೆದ ಶ್ಯಾಂಪಲ್ ಸಮೇತ ರೈತರಿಗೆ ಆಗಿರುವ ನಷ್ಟದ ಕುರಿತು ದೂರು ನೀಡಲಾಗಿದೆ. ದೂರು ಆಧರಿಸಿ ಯಾರೊಬ್ಬ ಕೃಷಿ ಅಧಿಕಾರಿಗಳು, ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ. ಕಾರಣ ಕಳಪೆ ಬೀಜ ಮಾರಾಟ ಮಾಡಿರುವ ಕಂಪೆನಿಯಿಂದ ಅಥವಾ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ರೈತರಾದ ಮುದಿಗೌಡ, ಗದ್ದೆಪ್ಪ, ರಾಯಪ್ಪ, ಚಂದಪ್ಪ, ಬಸವರಾಜ ಆಗ್ರಹಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.