ADVERTISEMENT

ಕುಡಿವ ನೀರು: 100 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 9:40 IST
Last Updated 12 ಏಪ್ರಿಲ್ 2011, 9:40 IST
ಕುಡಿವ ನೀರು: 100 ಕೋಟಿ ಬಿಡುಗಡೆ
ಕುಡಿವ ನೀರು: 100 ಕೋಟಿ ಬಿಡುಗಡೆ   

ಮಸ್ಕಿ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಯಚೂರು ಜಿಲ್ಲೆಗೆ 100 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಜಗದೀಶ ಶಟ್ಟರ್ ತಿಳಿಸಿದರು.

ಸಮೀಪದ ಸಂತೆಕೆಲ್ಲೂರು ಗ್ರಾಮದಲ್ಲಿ ಸೋಮವಾರ ಜಲ ನಿರ್ಮಲ ಯೋಜನೆಯಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಬ್ಯಾಂಕನ್ ವಿಶೇಷ ಅನುದಾನ ಪಡೆದು ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೆ 816 ಕೋಟಿ ರೂ. ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿದೆ ಎಂದರು.

ಈಗಾಗಲೇ ಜಿಲ್ಲೆಯ 361 ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದು, ಇನ್ನು 304 ಗ್ರಾಮಗಳಿಗೆ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರು ಪೂರೈಕೆಗಾಗಿ ಪ್ರತೇಕವಾಗಿ ಎಂಜಿನಿಯರಿಂಗ್ ವಿಭಾಗ ತೆಗೆಯಲಾಗಿದೆ. ಕುಡಿಯುವ ನೀರಿನ ತೊಂದರೆ ಉದ್ಭ ವಿಸದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

ಮಳೆಗಾಲ ಆರಂಭವಾಗುವುದಕ್ಕಿಂತ ಪೂರ್ವದಲ್ಲಿ ರಾಜ್ಯದಲ್ಲಿರುವ ಕೆರೆಗಳ ಹೂಳು ತೆಗೆಯುವುದು ಮತ್ತು ಕೆರೆ ಸಂರಕ್ಷಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಕೋಟಿ ರೂ. ಬಿಡುಗಡೆ ಮಾಡಿದೆ. ಸಾರ್ವಜನಿಕರ ಮೂಲ ಸೌಕರ್ಯ ಒದಗಿಸುವಲ್ಲಿ ಇಲಾಖೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದು, ಸಾರ್ವಜನಿಕರು ಸರ್ಕಾರದ ಕೆಲಸಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಕೇಂದ್ರದಿಂದ ತಾರತಮ್ಯ : ಕಳೆದ ವರ್ಷ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಹಣ ಬಿಡುಗಡೆ ಮಾಡದೆ ತಾರತಮ್ಯ ಮಾಡಿದೆ ಎಂದು ಸಚಿವ ಜಗದೀಶ ಶಟ್ಟರ್ ಅಸಮಾಧಾನ ವ್ಯಕ್ತಪಡಿಸಿ ಅದಕ್ಕಾಗಿ ಮುಖ್ಯಮಂತ್ರಿಗಳ ಗ್ರಾಮ ಸಡಕ್ ಯೋಜನೆ ಜಾರಿಗೆ ತಂದಿದ್ದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 20 ಕಿ.ಮೀ.ರಸ್ತೆ ನಿರ್ಮಿಸುವ ಯೋಜನೆ ಜಾರಿಗೆ ತಂದಿದೆ ಎಂದರು.

ಶಾಸಕ ಪ್ರತಾಪಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಮನೋಹರ ಮಸ್ಕಿ, ಹಾಲಪ್ಪ ಆಚಾರಿ, ಶಂಕರಗೌಡ ಹರವಿ ಉಪಸ್ಥಿತರಿದ್ದರು. ಗುರುಬಸವ ಮಹಾಸ್ವಾಮಿ ಸಾನಿದ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.