ADVERTISEMENT

`ಕೆಪಿಸಿ ವಿದ್ಯುತ್ ಉತ್ಪಾದನೆ: ಶ್ಲಾಘನೀಯ'

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 8:20 IST
Last Updated 22 ಜುಲೈ 2013, 8:20 IST

ರಾಯಚೂರು: ರಾಜ್ಯದಲ್ಲಿ ಕರ್ನಾಟಕ ವಿದ್ಯುತ್ ನಿಗಮವು ಆರಂಭದಲ್ಲಿ ಕೇವಲ 650 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭಿಸಿ, ಇಂದು ರಾಜ್ಯದಲ್ಲಿ 6,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ನಿಗಮದ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ವಿದ್ಯುತ್ ನಿಗಮದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಎನ್.ಎಸ್ ಬೇಂದ್ರೆ ಹೇಳಿದರು.

ತಾಲ್ಲೂಕಿನ ಶಕ್ತಿನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 44ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂದಿನ ಮೇಧಾವಿ ಎಂಜಿನಿಯರ್‌ಗಳು ಸಂಕಷ್ಟದ ಬದುಕಿನೊಂದಿಗೆ ಗುಡ್ಡಗಾಡುಗಳನ್ನು ಕೊರೆದು ಜಲ ವಿದ್ಯುತ್ ಘಟಕ ರೂಪಿಸಿದರು. ನಾಡಿಗೆ ಬೆಳಕು ನೀಡಿದ ನಿಗಮದ ಅನುಭವಿ ನಿವೃತ್ತ ಎಂಜಿನಿಯರ್ ಹೆಬ್ಬಳಿ ಅವರ ಶ್ರಮ ಗಮನಾರ್ಹ. ಹೊಸ ಮಾದರಿ ವಿದ್ಯುತ್ ಉತ್ಪಾದನೆಗೆ ನಿಗಮ ಮುಂದಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಆರ್‌ಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಿ. ವೇಣುಗೋಪಾಲ ಮಾತನಾಡಿ, ಕರ್ನಾಟಕ ವಿದ್ಯುತ್ ನಿಗಮ ನಡೆದು ಬಂದ ದಾರಿ ಹಾಗೂ ಮಹತ್ವದ ವಿದ್ಯುತ್ ಕೇಂದ್ರಗಳ ಸ್ಥಾಪನೆ ಮತ್ತು ನಿವೃತ್ತಿ ಹೊಂದಿದ ಎಂಜಿನಿಯರ್‌ಗಳು ಕೈಗೊಂಡ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧಿಕಾರಿಗಳು ಹಾಗೂ ಉದ್ಯೋಗಿಗಳ ಪ್ರಾಮಾಣಿಕ ಪ್ರಯತ್ನದಿಂದಾಗಿ ಸರ್ಕಾರದ ಮಟ್ಟದಲ್ಲಿ ವಿಶೇಷ ಸ್ಥಾನ ಮಾನ ದೊರಕಿದೆ. ಸಮಗ್ರ ಭಾರತದ ವಿದ್ಯುತ್ ಕ್ಷೇತ್ರದಲ್ಲಿಯೇ ನಿಗಮವು ಮಹತ್ವದ ಸಾಧನೆ ಮಾಡಿದೆ. 2011-12ನೇ ಸಾಲಿನಲ್ಲಿ ನಿಗಮ ವಿದ್ಯುತ್ ಉತ್ಪಾದನೆಯಲ್ಲಿ ಗುರಿ ಮೀರಿ ಸಾಧನೆ ಮಾಡಿದೆ ಎಂದು ವಿವರಿಸಿದರು.

ಆರ್‌ಟಿಪಿಎಸ್‌ನ ಚಾಲನೆ ಮತ್ತು ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಡಿ. ಚಂದ್ರಕಾಂತ ಅವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ ಅವರ ಬರೆದ `ಸ್ಕೀರ್ಮಾಟಿಕ್ ಡಯಾಗ್ರಾಂ ಟಾಸ್ ಯೂನಿಟ್-4ಎಂಎಚ್‌ಐ' ಪದ್ಧತಿ ಎಂಬ ಪುಸ್ತಕ ಬಿಡುಗಡೆ ಮಾಡಿದರು.

ಆರ್‌ಟಿಪಿಎಸ್‌ನ ಮುಖ್ಯ ಎಂಜಿನಿಯರ್‌ಗಳಾದ ಕೆ.ವಿ ವೆಂಕಟಾಚಲಪತಿ, ಜಿ.ನಾರಾಯಣಸ್ವಾಮಿ, ಎನ್.ಕೆ ಪ್ರಭಾಕರ, ಜಿ.ಸಿ ಮಹೇಂದ್ರ, ಚಿನ್ನಸೋಮಯ್ಯ, ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಗೋಕುಲನಂದ, ಹಣಕಾಸು ವಿಭಾಗದ ವಿ.ಎಸ್ ಭಾವಿಕಟ್ಟಿ, ಲಚಮಪ್ಪ, ಆರ್‌ಟಿಪಿಎಸ್ ನೌಕರರ ಸಂಘದ ಅಧ್ಯಕ್ಷ ಜೆ.ವಿ.ಎಸ್ ರೆಡ್ಡಿ, ಕೆಪಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಮುತ್ತಯ್ಯ ಗುಣಾಚಾರಿ, ಎಸ್‌ಸಿ,ಎಸ್‌ಟಿ ನೌಕರರ ಸಂಘದ ಭೀಮಯ್ಯನಾಯಕ ಹಾಗೂ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.