ADVERTISEMENT

ಕೆಸರುಗದ್ದೆಯಾದ ಮುಖ್ಯ ರಸ್ತೆ!

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 7:04 IST
Last Updated 20 ಸೆಪ್ಟೆಂಬರ್ 2013, 7:04 IST
ಹಟ್ಟಿ ಗ್ರಾಮದ  ಹದಗೆಟ್ಟ ಮುಖ್ಯ ರಸ್ತೆ ಮೇಲೆ ಪ್ರಯಾಸದಿಂದ ಸಂಚರಿಸುತ್ತಿರುವ ಬಸ್‌
ಹಟ್ಟಿ ಗ್ರಾಮದ ಹದಗೆಟ್ಟ ಮುಖ್ಯ ರಸ್ತೆ ಮೇಲೆ ಪ್ರಯಾಸದಿಂದ ಸಂಚರಿಸುತ್ತಿರುವ ಬಸ್‌   

ಹಟ್ಟಿ ಚಿನ್ನದ ಗಣಿ: ಆರು ತಿಂಗಳುಗ­ಳಿಂದ ಹಟ್ಟಿ ಗ್ರಾಮದ ಮುಖ್ಯ ರಸ್ತೆ, ಕಾಕಾನಗರದಿಂದ ಹಟ್ಟಿ ಗ್ರಾಮದ ಬಸ್‌ ನಿಲ್ದಾಣದವರೆಗೆ  ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ.  ಒಂದು ತಿಂಗಳಿಂದ ಆಗಾಗ್ಗೆ ಬೀಳುತ್ತಿರುವ ಮಳೆಯಿಂದಾಗಿ ರಸ್ತೆ ಕೆಸರು ಗದ್ದೆಯಾಗಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಹಟ್ಟಿಯಿಂದ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ದಿನಾಲು ಸಾವಿರಾರು  ವಾಹನಗಳು ಸಂಚರಿಸುತ್ತವೆ.  ಈ ರಸ್ತೆಯ ಎರಡು ಬದಿ ಸುಮಾರು 1 ಕಿ.ಮೀ. ಉದ್ದಕ್ಕೆ ವಾಣಿಜ್ಯ ಮಳಿಗೆಗಳು ಇವೆ. ಇದೊಂದು ವ್ಯಾಪಾರ ಕೇಂದ್ರವಾಗಿದೆ.

ಈ ರಸ್ತೆ ಮೇಲೆ  ಸಂಚಾರ ದಟ್ಟಣೆ ಹೆಚ್ಚು ಇರುತ್ತದೆ. ಹಟ್ಟಿ ಚಿನ್ನದ ಗಣಿಗೆ  ಊಟಿ ಮತ್ತು ಹೀರಾಬುದ್ದಿನ್ನಿ ಉಪಗಣಿಗಳಿಂದ ಅದಿರು ಸಾಗಿಸುವ ಲಾರಿ,  ಬಸ್‌, ಹಟ್ಟಿ ಗಣಿಗೆ ಭಾರಿ ಸಾಮಾನು ತರುವ ಲಾರಿಗಳು ಇದೇ ಮಾರ್ಗವಾಗಿ ಹೋಗಬೇಕು. ಸಂಚಾರದ ಒತ್ತಡದಿಂದ ದಿನ ನಿತ್ಯ ಗುಂಡಿಗಳು ಮತಷ್ಟು ಆಳ ಮತ್ತು ಅಗಲವಾಗುತ್ತಿವೆ.

ಗಣಿ ಆಡಳಿತ ಬುಧವಾರ ಕಾಕಾ­ನಗರದ ಹತ್ತಿರ ರಸ್ತೆ ಗುಂಡಿಗಳನ್ನು ಮುಚ್ಚಲು ಕೆಂಪು ಮಣ್ಣು ಹಾಕಿತ್ತು. ರಾತ್ರಿ ಸುರಿದ ಮಳೆಯಿಂದ ಎಲ್ಲ ಕೆಸರುಮಯವಾಗಿದೆ. ವಾಹನಗಳು ಓಡಾಡಲು  ಆಗುತ್ತಿಲ್ಲ. ಹಟ್ಟಿ ಕ್ಯಾಂಪಿನಿಂದ ಕುಡಿಯುವ ನೀರು ತರಲು ಆಗುತ್ತಿಲ್ಲ.
ಕಲ್ಲು ಹಾಕಿ ನಂತರ ಮಣ್ಣು ಹಾಕಿದ್ದರೆ ಸಂಚಾರಕ್ಕೆ ಸ್ವಲ್ಪ ಮಟ್ಟಿಗಾ­ದರೂ ಅನುಕೂಲವಾ­ಗು­ತ್ತಿತ್ತು. ಆದರೆ ಬರಿ ಮಣ್ಣು ಹಾಕಿದ್ದ­ರಿಂದ ತೊಂದರೆ ಮತ್ತಷ್ಟು ಹೆಚ್ಚಾಗಿದೆ ಎಂದು ಗ್ರಾಮದ ನಿವಾಸಿಗಳಾದ ಹನುಮಂತ ನಾಯಕ, ಮೌನೇಶ, ಯಾಕೂಬ್‌ ಖುರೇಷಿ,  ರಾಮಾಂಜನೇಯ ಹಾಗೂ ಪ್ರಶಾಂತ ಹೇಳುತ್ತಾರೆ. 

ಲೋಕೋಪಯೋಗಿ   ಇಲಾಖೆಯ ಅಧಿಕಾರಿಗಳು ರಸ್ತೆ ಶಾಶ್ವತ ದುರಸ್ತಿಗೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.