ADVERTISEMENT

ಕೈಗಾರಿಕೆ ಸ್ಥಾಪನೆಗೆ ಕೃಷಿ ಯೋಗ್ಯ ಭೂಮಿ ಬೇಡ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 8:35 IST
Last Updated 20 ಸೆಪ್ಟೆಂಬರ್ 2011, 8:35 IST

ರಾಯಚೂರು: ರಾಜಧಾನಿ ಬೆಂಗಳೂರಿನಲ್ಲಿ ಕೈಗಾರಿಕೆಗಳು ವ್ಯಾಪಕವಾಗಿ ಸ್ಥಾಪನೆಗೊಂಡಿದ್ದು, ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಕೃಷಿ ಆಧಾರಿತ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹಿಸುವ ದಿಶೆಯಲ್ಲಿ ಗಮನಹರಿಸಲಾಗಿದೆ. ಕೃಷಿ ಯೋಗ್ಯ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ, ಭೂ ಬ್ಯಾಂಕ್‌ಗೆ ರಾಜ್ಯ ಸರ್ಕಾರ ಪಡೆಯಬಾರದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಮಂಡಳದ(ಎಫ್‌ಕೆಸಿಸಿಐ) ಅಧ್ಯಕ್ಷ ಜೆ.ಆರ್ ಬಂಗೇರಾ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 1ಮತ್ತು 2ರಂದು ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು, ಇದೇ ವಿಷಯವನ್ನು ಪ್ರಮುಖವಾಗಿ ಗಮನ ಸೆಳೆಯಲಾಗುತ್ತಿದೆ. 

ಉತ್ಪಾದನೆ, ಸೇವಾ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ವ್ಯವಸ್ಥಿತ ಅಭಿವೃದ್ಧಿ ಮುಖಾಂತರ ರಾಜ್ಯವನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಉದ್ಯೋಗ ಅವಕಾಶ ಕಲ್ಪಿಸುವ ದಿಶೆಯಲ್ಲಿ ಕುಶಲ ಅಭಿವೃದ್ಧಿ ತರಬೇತಿಗಳನ್ನು ನಡೆಸುವುದು, ಗ್ರಾಮೀಣ ಪ್ರದೇಶದಲ್ಲಿರುವ ಕುಶಲಕರ್ಮಿಗಳಿಗೆ ತರಬೇತಿ ನೀಡಿ ಮಾರ್ಗದರ್ಶನ ಮಾಡುವ ಯೋಜನೆ ಇದೆ ಎಂದರು.

ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಣ್ಣ ಕೈಗಾರಿಕೆ ಸ್ಥಾಪಿಸಲು ಉತ್ಸುಕತೆ ತೋರುವವರಿಗೆ ಎಫ್‌ಕೆಸಿಸಿಐ ಸದಾ ಪ್ರೋತ್ಸಾಹಿಸುತ್ತದೆ. ಬ್ಯಾಂಕ್‌ಗಳಿಂದ ಸಾಲದ ನೆರವು ಕಲ್ಪಿಸಿ ಅವರು ಉದ್ದಿಮೆಯಲ್ಲಿ ಯಶಸ್ಸು ಹೊಂದಲು ಅಗತ್ಯವಾದ ಮಾರ್ಗದರ್ಶನ, ಸಹಾಯ ಕಲ್ಪಿಸಲು `ಮೆಂಟರ್~ ಮಾರ್ಗದರ್ಶಿ ಯೋಜನೆಯನ್ನು ರೂಪಿಸುತ್ತಿದೆ. ಈ ಯೋಜನೆಯಡಿ ಹಿರಿಯ ಉದ್ದಿಮೆದಾರರು ಸಲಹೆ, ಮಾರ್ಗದರ್ಶನ ನೀಡುವರು ಎಂದು ತಿಳಿಸಿದರು.

ಏಕ ರೀತಿಯ ತೆರಿಗೆ ಪದ್ಧತಿ ಅಳವಡಿಕೆ,ಭೂಮಿ ಕಲ್ಪಿಸುವುದು ಸೇರಿದಂತೆ ಹಲವು ರೀತಿಯ ಬೇಡಿಕೆಗಳನ್ನು ಸಂಸ್ಥೆ ಸರ್ಕಾರದ ಮುಂದಿಟ್ಟಿದೆ.  ಆದರೆ, ಕೃಷಿ ಯೋಗ್ಯವಾದ ಭೂಮಿಯನ್ನು ಯಾವತ್ತು ಪಡೆಯುವುದಿಲ್ಲ. ಸರ್ಕಾರವು ಸಹ ಭೂ ಬ್ಯಾಂಕ್‌ಗೆ ಕೃಷಿ ಯೋಗ್ಯ ಭೂಮಿ ಪಡೆಯಲೇಬಾರದು ಎಂಬುದು ತಮ್ಮ ಬೇಡಿಕೆ ಆಗಿದೆ ಎಂದು ಹೇಳಿದರು.

ಮೆದು ಕಬ್ಬಿಣ (ಸ್ಪಾಂಜ್ ಐರನ್) ಉತ್ಪಾದನೆ ಕಂಪೆನಿ ಸಂಕಷ್ಟ ಎದುರಿಸುತ್ತಿವೆ. ಕಾರ್ಮಿಕರು, ಉದ್ದಿಮೆದಾರರು ಉಪವಾಸವನ್ನು ಬಳ್ಳಾರಿಯಲ್ಲಿ ನಡೆಸಿದ್ದಾರೆ. ಕಾನೂನು ಚೌಕಟ್ಟಿನಡಿಯಲ್ಲಿಯೇ ಈ ಮೆದು ಕಬ್ಬಿಣ ಉತ್ಪಾದನೆ ಕಂಪೆನಿಗಳಿಗೆ ಅಗತ್ಯವಾದ ಕಚ್ಚಾವಸ್ತು ಪೂರೈಸಲು ಕೇಂದ್ರ ಸರ್ಕಾರ ಗಮನಹರಿಸಬೇಕು. ಈ ಮೂಲಕ ಕಾರ್ಮಿಕರು, ಉದ್ದಿಮೆದಾರರನ್ನು ಬದುಕಿಸಬೇಕು ಎಂದರು.

ರಾಯಚೂರು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜವಾಹರ ಜೈನ್, ಕಾರ‌್ಯದರ್ಶಿ ತ್ರಿವಿಕ್ರಮ ಜೋಶಿ, ಜಗದೀಶ ಗುಪ್ತಾ, ಹರವಿ ನಾಗನಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.