ADVERTISEMENT

ಕೊಳವೆಬಾವಿ ಡ್ರೈ ಆಗ್ತಿವೆ, ನೀರಿದ್ರೂ ಕರೆಂಟ್ ಇಲ್ಲ..!

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:42 IST
Last Updated 4 ಏಪ್ರಿಲ್ 2013, 6:42 IST

ರಾಯಚೂರು: ಸರ್ ನೀರಿನ ಸಮಸ್ಯೆ ಇದೆ... ತೋಡಿದ ಕೊಳವೆ ಬಾವಿಗಳು ಡ್ರೈ ಆಗುತ್ತಿವೆ... ಚೆನ್ನಾಗಿರುವ ಕೊಳವೆ ಬಾವಿ ಪಕ್ಕ ಮತ್ತೊಂದು ಕೊಳವೆ ಬಾವಿ ತೊಡಲು ಗ್ರಾಮಸ್ಥರೇ ಬಿಡುತ್ತಿಲ್ಲ...

ಸರ್ ನಮ್ ಕಡೆ ನೀರಿನ ಸಮಸ್ಯೆ ಅಷ್ಟಾಗಿಲ್ಲ. ಈ ಕರೆಂಟ್ ಸಮಸ್ಯೆ ಸಿಕ್ಕಾಪಟ್ಟೆ ಆಗ್ಬಿಟ್ಟಿದೆ! ಅದರಿಂದ ಸಮರ್ಪಕ ನೀರು ಪೂರೈಕೆಗೆ ತೊಂದರೆ ಆಗಿದೆ!
400 ಅಡಿ ಆಳದಂತೆ ನಾಲ್ಕು ಕೊಳವೆ ಬಾವಿ ಕೊರೆದ್ರೂ ಹನಿ ನೀರು ಸಿಕ್ಕಿಲ್ಲ! ಮೂರು ತಿಂಗಳಿಂದ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡುತ್ತಿದ್ದೇವೆ.

ಹೀಗೆ ಕೆಲ ಗಂಟೆಗಳವರೆಗೆ ಬುಧವಾರ ಇಲ್ಲಿನ ಸಹಾಯಕ ಆಯುಕ್ತರ ಕಚೇರಿ ಸಭಾಭವನದಲ್ಲಿ ಜಿಲ್ಲಾಧಿಕಾರಿ ಉಜ್ವಲ ಘೋಷ್ ಅವರು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಮತ್ತು ಪರಿಹಾರ ಕ್ರಮಗಳ ಕುರಿತು ನಡೆಸಿದ ಸಭೆಯಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಿದ್ದ ಅಧಿಕಾರಿಗಳು ಮೇಲಿನಂತೆ ನೀರಿನ ಅಭಾವದ ಪರಿಸ್ಥಿತಿ ಬಿಚ್ಚಿಟ್ಟರು.

ರಾಯಚೂರು ನಗರಸಭೆ ವತಿಯಿಂದ 363 ಕೊಳವೆ ಬಾವಿ ಕೊರೆಯಲಾಗಿದ್ದು, 43 ಫೇಲ್ ಆಗಿದೆ. ಸಿಂಧನೂರು ನಗರಸಭೆಯಿಂದ ಕೊರೆಯಲಾಗಿದ್ದ 37 ಕೊಳವೆ ಬಾವಿಗಳಲ್ಲಿ 12 ಫೇಲ್, ಮಾನ್ವಿ ಪುರಸಭೆ ವತಿಯಿಂದ  94 ಕೊಳವೆ ಬಾವಿ ಕೊರೆಯಲಾಗಿದ್ದು, 23 ವಿಫಲಗೊಂಡಿವೆ. ದೇವದುರ್ಗ ಪುರಸಭೆಯಿಂದ  103 ಕೊಳವೆ ಬಾವಿ ಕೊರೆಯಲಾಗಿದ್ದು, 15ರಲ್ಲಿ ನೀರು ಇಲ್ಲ.  ಲಿಂಗಸುಗೂರು ಪುರಸಭೆಯಿಂದ 48  ಕೊಳವೆ ಬಾವಿ ಕೊರೆಯಲಾಗಿದ್ದು, ಇದರಲ್ಲಿ 18ರಲ್ಲಿ ನೀರು ಇಲ್ಲವಾಗಿದೆ. ಮುದಗಲ್ ಪಟ್ಟಣ ಪಂಚಾಯತ್ ಕೊರೆಯಲಾದ 88 ಕೊಳವೆ ಬಾವಿಗಳಲ್ಲಿ 19 ಫೇಲ್ ಆಗಿವೆ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ರಾಯಚೂರು ನಗರಸಭೆಯ 35 ವಾರ್ಡ್‌ಗಳಲ್ಲಿ ಭಾಗಶಃ ನೀರಿನ ಸಮಸ್ಯೆ ಇದೆ. ಸಿಂಧನೂರು ನಗರಸಭೆ 31 ವಾರ್ಡ್‌ಗಳಲ್ಲಿ  ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಮಾನ್ವಿಯ 23 ವಾರ್ಡ್‌ಗಳಲ್ಲಿ  ಭಾಗಶಃ ನೀರಿನ ಸಮಸ್ಯೆ ಇದೆ. ದೇವದುರ್ಗದ 23 ವಾರ್ಡ್ ಮತ್ತು ಲಿಂಗಸುಗೂರು ಪುರಸಭೆಯ 23 ವಾರ್ಡಗಳಲ್ಲಿ ಮತ್ತು ಮುದಗಲ್ ಪಟ್ಟಣ ಪಂಚಾಯತ್‌ನ 19 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಸಿಂಧನೂರು ತಾಲ್ಲೂಕಿನ ಇಟಗಿ, ಲಿಂಗಸುಗೂರು ತಾಲ್ಲೂಕಿನ ಅನ್ವರಿ, ದೇವದುರ್ಗ ತಾಲ್ಲೂಕಿನ ವಂದಲಿ, ಮಲ್ಲಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದರು. ಮಾನ್ವಿ ತಾಲ್ಲೂಕಿನ ಮುಸ್ಲಾಪುರ, ನಂದಿಹಾಳ, ರಾಜಲದಿನ್ನಿ ಹಳ್ಳಗಳಲ್ಲಿ ನೀರಿಲ್ಲ.ಯುಕೆಪಿಯಿಂದ ನೀರು ಬಿಟ್ಟರೆ ಮಾತ್ರ ನೀರು ಪಡೆಯಬಹುದು. ಇದೇ ತಾಲ್ಲೂಕಿನ ಮರಾಠ ಗ್ರಾಮದಲ್ಲಿ 4 ಕೊಳವೆ ಬಾವಿ 400 ಅಡಿ ತೋಡಿದರೂ ನೀರಿ ಸಿಕ್ಕಿಲ್ಲ ಎಂದು  ಮಾನ್ವಿ ತಾಲ್ಲೂಕಿನ ಎಇಇ ಪ್ರಕಾಶ್ ತಿಳಿಸಿದರು.

ಕೆಲ ತಾಂಡಾದಲ್ಲಿ ಕೊಳವೆ ಬಾವಿ ತೋಡಲು ಹೋದರೆ ಜನ ಆಕ್ಷೇಪ ಎತ್ತುತ್ತಿದ್ದಾರೆ. ತಮ್ಮ ಗ್ರಾಮಕ್ಕೆ ನೀರು ಕಡಿಮೆ ಆಗುತ್ತದೆ ಎಂಬ ಆತಂಕ ಆ ಜನರದ್ದಾಗಿದೆ. ಮಾನ್ವಿ ನಗರ ಪ್ರದೇಶದ ವಾರ್ಡ್ 6ರಲ್ಲಿ ನೀರಿನ ಸಮಸ್ಯೆ ಇದೆ ಎಂದರು. ಸಿಂಧನೂರು ನಗರದಲ್ಲಿ ನೀರಿನ ಸಮಸ್ಯೆ ಇಲ್ಲ. ಕರೆಂಟ್ ಸಮಸ್ಯೆ ಹೆಚ್ಚಾಗಿದೆ ಎಂದು ಅಲ್ಲಿನ ಅಧಿಕಾರಿ ಸಭೆಯಲ್ಲಿ ಹೇಳಿದರು.

ಸಮೂಹ ಗ್ರಾಮ ನೀರು ಪೂರೈಕೆ ಯೋಜನೆಯಡಿ 31 ನೀರು ಪೂರೈಕೆ ಯೋಜನೆಗಳಿವೆ. ಕೆಲ ಯೋಜನೆಗಳು ಪೂರ್ಣಗೊಳಿಸಲಾಗಿದೆ. ಇನ್ನು ಕೆಲ ಯೋಜನೆಗಳು ಮುಗಿಯುವ ಹಂತದಲ್ಲಿವೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹಮ್ಮದ್ ಯೂಸೂಫ್ ಸಭೆಗೆ ವಿವರಣೆ ನೀಡಿದರು.
ರಾಯಚೂರು ಜೆಸ್ಕಾಂ ರಾಯಚೂರು ಗ್ರಾಮೀಣ ಉಪ ಕೇಂದ್ರದಲ್ಲಿ ಕೆಲ ತೊಂದರೆ ಇದೆ. ಜಲ ನಿರ್ಮಲ ಯೋಜನೆಯಡಿಯಲ್ಲಿ 63 ಕಾಮಗಾರಿಗಳಲ್ಲಿ 26 ಪೂರ್ಣಗೊಂಡಿದೆ. ಇನ್ನು ಉಳಿದ ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಅನುಷ್ಠಾನ ಮಾಡಲಾಗುತ್ತದೆ ಎಂದು ಹೇಳಿದರು.

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಮುಂಜಾಗೃತೆ ಕ್ರಮಗಳನ್ನು ವಹಿಸಿ, ಕ್ರಿಯಾ ಯೋಜನೆಗಳನ್ನು ಅಂದಾಜು ಪಟ್ಟಿಯೊಂದಿಗೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಸಭೆಯಲ್ಲಿದ್ದ ಎಇಇ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ ಬಿಸ್ನಳ್ಳಿ, ಸಹಾಯಕ ಆಯುಕ್ತೆ ಮಂಜುಶ್ರೀ, ಲಿಂಗಸುಗೂರು ಸಹಾಯಕ ಆಯುಕ್ತ ಟಿ ಯೋಗೇಶ್, ಹೆಚ್ಚುವರಿ ಪೊಲೀಸ್ ವರಿಷ್ಠ ಬಿ ಮಹಾಂತೇಶ, ಜಿ.ಪಂ ಉಪಕಾರ್ಯದರ್ಶಿ ಮಹಮ್ಮದ್ ಯೂಸೂಫ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.