ADVERTISEMENT

ಕ್ಲಸ್ಟರ್‌ ಪದ್ಧತಿ ಹಿಂಪಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಮೇ 2018, 7:28 IST
Last Updated 12 ಮೇ 2018, 7:28 IST

ರಾಯಚೂರು: ಗುಲಬರ್ಗಾ ವಿಶ್ವವಿದ್ಯಾ ಲಯದ ಅವೈಜ್ಞಾನಿಕ ಕ್ಲಸ್ಟರ್‌ ಪರೀಕ್ಷಾ ಪದ್ಧತಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಅನುದಾನ ರಹಿತ ಖಾಸಗಿ ಕಾಲೇಜುಗಳ ಒಕ್ಕೂಟದಿಂದ ಮೇ 14 ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಅಧ್ಯಕ್ಷ ಎಸ್.ಶ್ರೀನಿವಾಸ ಹೊಸಪೇಟೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017–18ನೇ ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ಕ್ಲಸ್ಟರ್‌ ಪದ್ಧತಿಯನ್ನು ಪರಿಚಯಿಸುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ. ಶಿಕ್ಷಣಕ್ಕಾಗಿ ಪಟ್ಟಣ ಪ್ರದೇಶದಲ್ಲಿ ವಾಸ ಮಾಡುವುದು ಅಸಾಧ್ಯವಾಗಿದ್ದು, ಹಳ್ಳಿಗಳಿಂದ ತಾಲ್ಲೂಕು ಕೇಂದ್ರಗಳಿಗೆ ಏಕ ಕಾಲದಲ್ಲಿ ಪ್ರಯಾಣಿಸಲು ಅಸಾಧ್ಯ ವಾಗಿದೆ ಎಂದರು.

2011–12 ರಲ್ಲಿ ಬಿಸಿಎ ಹಾಗೂ ಬಿಬಿಎಂ ಕೋರ್ಸುಗಳಿಗೆ ಕ್ಲಸ್ಟರ್ ಪದ್ಧತಿ ಅಳವಡಿಸಿದ್ದರಿಂದ ಈ ಕೋರ್ಸುಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕಾಣಬಹುದಾಗಿದೆ. ಇದೇ ಪರಿಸ್ಥಿತಿ ಬಿಎ, ಬಿಕಾಂ ಹಾಗೂ ಬಿಎಸ್ಸಿಗೆ ಬರುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಈ ಪದ್ಧತಿಯನ್ನು ವಿರೋಧಿಸಲಾಗುತ್ತಿದ್ದು, ವಿಶ್ವ ವಿದ್ಯಾಲಯ ಸರ್ವಾಧಿಕಾರಿ ಧೋರಣೆಯಿಂದ ಜಾರಿಗೊಳಿಸಿರುವು ದು ವಿಷಾದನೀಯ ಎಂದು ತಿಳಿಸಿದರು.

ADVERTISEMENT

ರಾಜ್ಯದ ಯಾವುದೇ  ವಿಶ್ವವಿದ್ಯಾ ಲಯದಲ್ಲಿ ಜಾರಿಯಲ್ಲಿ ಇರದ ಕ್ಲಸ್ಟರ್ ಪದ್ಧತಿಯನ್ನು ಗುಲಬರ್ಗಾ ವಿಶ್ವವಿದ್ಯಾ ಲಯದಲ್ಲಿ ಜಾರಿಗೊಳಿಸುವಲ್ಲಿ ಹುನ್ನಾರ ನಡೆದಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ನಿಯಮಗಳನ್ನು ಗಾಳಿಗೆ ತೂರಿ ಕಲುಪತಿಗಳು ಅಜಾಂಡಗಳನ್ನು ಚರ್ಚಿಸಲು ಅವಕಾಶ ನೀಡಿದೇ ಏಕಾಏಕಿ ಅನುಮೋದನೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ವಿದ್ಯಾ ವಿಷಯಕ ಪರಿಷತ್ ಹಾಗೂ ಸಿಂಡಿಕೇಟ್ ಸದಸ್ಯರ ಸಭೆ ಕರೆದು ನಿರ್ಣಯ ಕೈಗೊಂಡಿರುವುದು ಅಸಿಂಧುವಾಗಿದೆ. ವಿದ್ಯಾರ್ಥಿಗಳು ಮಾನಸಿಕವಾಗಿ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಗ್ರಾಮೀಣ ವಿದ್ಯಾರ್ಥಿನಿಯರು ಪದವಿ ಶಿಕ್ಷಣದಿಂದ ದೂರ ಉಳಿಯು ವಂತಾಗುತ್ತದೆ ಎಂದು ದೂರಿದರು.

ಥಾಮಸ್ ಬೆಂಜಿಮನ್, ಶರಣಬಸವ ಪಾಟೀಲ ಜೋಳದಡಗಿ, ರಾಜಾ ಶ್ರೀನಿವಾಸ, ರುದ್ರಯ್ಯ ಸ್ವಾಮಿ, ಭಂಡಾರಿ, ಪ್ರೇಮಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.