ADVERTISEMENT

ಖಾತರಿ ದುರುಪಯೋಗ: ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 7:50 IST
Last Updated 6 ಅಕ್ಟೋಬರ್ 2012, 7:50 IST

ಹಟ್ಟಿ ಚಿನ್ನದ ಗಣಿ: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಡೆದ ಬಹಳಷ್ಟು ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಕಾಮಗಾರಿಗಳ ದುರುಪಯೋಗ ಮಾಡಿಕೊಳ್ಳಲಾಗಿದೆ. ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮವನ್ನು ಜರುಗಿಸಬೇಕೆಂದು ಸಭೆ ಆಗಮಿಸದ ಗ್ರಾಮದ ಗಣ್ಯರು ಒತ್ತಾಯಿಸಿದ ಪ್ರಸಂಗ ಶುಕ್ರವಾರ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2011-12ನೇ ಸಾಲಿನಲ್ಲಿ ನಡೆದ ಕಾಮಗಾರಿಗಳ ಸಮಾಜಿಕ ಲೆಕ್ಕ ಪರಿಶೋಧನೆ ಸಭೆಯಲ್ಲಿ ನಡೆಯಿತು.

ಅರಣ್ಯ ಇಲಾಖೆಯ ಸಸಿಗಳು ನೆಡುವ ಕಾರ್ಯಕ್ರಮವು ಸಂಪೂರ್ಣ ವಿಫಲವಾಗಿದೆ. ಕೃಷಿ ಚಟುವಟಿಕೆ ಇಲ್ಲದ ಬೀಳು ಭೂಮಿಯಲ್ಲಿ ಕೃಷಿ ಹೊಂಡಾ ನಿರ್ಮಿಸಲಾಗಿದೆ. ಉದ್ಯೋಗ ಖಾತರಿ ಕಾಮಗಾರಿಗಳು ಜೆಸಿಬಿ ಬಳಸಿ ಮಾಡಲಾಗಿದೆ. ಗ್ರಾಮ ಸಭೆ ನಡೆಸದೆ ಕಾಮಗಾರಿಗಳು ಆಯ್ಕೆ ಮಾಡಲಾಗಿದೆ. ಕೂಲಿ ಹಣ ಮಹಿಳಾ ಸಂಘಟನೆಗಳ ಮುಖಾಂತರ ನೀಡಲಾಗಿದೆ. ನೇರವಾಗಿ ಕೂಲಿಕಾರರಿಗೆ ನೀಡುತ್ತಿಲ್ಲ.  ಇದರಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದಾರೆ.
 
ಹೊಸ ಖಾತೆ ತೆಗೆಯುವುದು, ಜಾಬ್ ಕಾರ್ಡ್ ಮಾಡಿಸುವ ಹೊಣೆ ಸರ್ಕಾರೇತರ ಸಂಸ್ಥೆಯ ಹೊಣೆಯಾಗಿದೆ, ಇಷ್ಟೆಲ್ಲ ಅವ್ಯವಹಾರ ನಡೆಯಲು ಗ್ರಾಮ ಪಂಚಾಯಿತಿ ಆಡಳಿತದ ಹೊಣೆಗೇಡಿತನ ಕಾರಣ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಮಿಕ ಮುಖಂಡ ಅಮರಗುಂಡಪ್ಪ ನೆಲೋಗಿ, ಎಂ.ಸಿ. ನಿಂಗಪ್ಪ, ಕ್ಯಾಂಟೀನ್ ಮಹಿಬೂಬ್, ಎಂ.ಸಿ. ಚಂದ್ರಶೇಖರ ಸೇರಿದಂತೆ ಇತರರು ಆರೋಪಿಸಿದರು.

ಉದ್ಯೋಗ ಖಾತರಿ ಕಾಮಗಾರಿಗಳು ಆಯಾ ಇಲಾಖೆಗಳು ನಿರ್ವಹಿಸಿಕೊಂಡು ಹೋಗಬೇಕೆಂದು ಸಭೆಯ ಅಧ್ಯಕ್ಷತೆ ವಹಿಸಿದ ಅಧ್ಯಕ್ಷ ಜಿ. ಶ್ರೀನಿವಾಸ ಸ್ಪಷ್ಟನೆ ನೀಡಿದರು.


ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 6.5 ಲಕ್ಷ ಹೆಚ್ಚುವರಿ ಅನುದಾನ ಬಂದಿದೆ. ಇದನ್ನು ಬಳಸಿಕೊಳ್ಳಬೇಕು. 6 ತಿಂಗಳಿಗೆ ಒಂದು ಸಲ ಕಡ್ಡಾಯವಾಗಿ ಗ್ರಾಮ ಸಭೆ ನಡೆಸಬೇಕೆಂದು ನೋಡಲ್ ಅಧಿಕಾರಿ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಪಾಟೀಲ್ ಸಲಹೆ ನೀಡಿದರು.

ಲೆಕ್ಕ ಪರಿಶೋಧನೆ ಸಭೆಯ ಸಂಯೋಜಕ ಡಾಕೋಜಿ ಪವಾರ ಮಾತನಾಡಿ, ನಿಯಮ ಬದ್ಧವಾಗಿ ನಡೆಯದ ಕಾಮಗಾರಿಗಳು ಪರಿಶೀಲಿಸಿ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಪಿಡಿಒ ನಜೀರ ಸಾಬ್, ಉಪಾಧ್ಯಕ್ಷೆ ಶಾರದಾ ಪಾಟೀಲ್, ಸದಸ್ಯರಾದ ರಮೇಶ ಗೌಡ, ರಂಗನಾಥ, ಶ್ರೀನಿವಾಸ ಮಧುಶ್ರೀ, ಇತರರು ಇದ್ದರು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT