ADVERTISEMENT

ಗಣಿ ಕಾರ್ಮಿಕರಿಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 9:55 IST
Last Updated 14 ಜೂನ್ 2011, 9:55 IST

ಹಟ್ಟಿ ಚಿನ್ನದ ಗಣಿ: ಗಣಿ ಆಡಳಿತವು ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸದೆ ಸುಳ್ಳು ಸಬೂಬು ನೀಡುತ್ತಾ ವಿಳಂಬ ಧೋರಣೆ ಅನುಸರಿಸುತ್ತಾ ಬರುತ್ತಿದೆ. ಆಡಳಿತ ವರ್ಗದ ಈ ನೀತಿ ಖಂಡಿಸಿ ಕಾರ್ಮಿಕರ ಸಂಘವು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.

ಬೆಳಗಿನ 7 ಮತ್ತು ಮಧ್ಯಾಹ್ನದ 3 ಗಂಟೆ ಪಾಳಿಯ ಸಹಸ್ರಾರು ಕಾರ್ಮಿಕರು ಕಾರ್ಮಿಕರ ಸಂಘದಿಂದ ಮೆರವಣಿಗೆಯಲ್ಲಿ ತೆರಳಿದರು.  ಕಂಪೆನಿಯ ಮುಖ್ಯ ದ್ವಾರದ ಎದುರು ಸಮಾವೇಶಗೊಂಡು ಸಭೆ ನಡೆಸಿದರು.

ಸಂಘದ ಉಪಾಧ್ಯಕ್ಷ ಅಮರಗುಂಡಪ್ಪ ನೆಲಗಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಕಾರ್ಮಿಕರ ಪ್ರಮುಖ ಬೇಡಿಕೆಗಳಾದ ಹಿರಿಯ ಕಾರ್ಮಿಕರ ಮಕ್ಕಳಿಗೆ ನೌಕರಿ ಕೊಡಬೇಕು. ಗಣಿಯಲ್ಲಿ ಎಲ್ಲಾ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು.

ಎರಡು ತಿಂಗಳುಗಳ ಹಿಂದೆ 25 ಸಾವಿರ ರೂಪಾಯಿ ಬೋನಸ್ ನೀಡಲು ಮನವಿ ಸಲ್ಲಿಸಲಾಗಿತ್ತು. ಆದರೆ ಆಡಳಿತ ವರ್ಗ ಇಲ್ಲಿವರೆಗೆ ಸ್ಪಂದಿಸಿಲ್ಲ. ತಕ್ಷಣ ಬೋನಸ್ ನೀಡಬೇಕು. ನಿರ್ದೇಶಕ ಮಂಡಳಿ ಹಾಗೂ ಸರ್ಕಾರದ ಅನುಮೋದನೆ ಬೇಕು ಎಂಬ ಕಾರಣ ಹೇಳಿ ಕಾಲಹರಣ ಮಾಡುವುದನ್ನು ಕೈಬಿಡಬೇಕು. ಕಾರ್ಮಿಕರು ವಾಸಿಸಲು 500 ಮನೆಗಳನ್ನು ನಿರ್ಮಿಸಬೇಕು. ಸಂಪೂರ್ಣವಾಗಿ ಹದಗೆಟ್ಟಿರುವ ಆಸ್ಪತ್ರೆ ವ್ಯವಸ್ಥೆ ಸರಿಪಡಿಸಬೇಕು ಎಂದು ಅವರು ಆಗ್ರಹಪಡಿಸಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಸಂಗಯ್ಯ ಸ್ವಾಮಿ ಮಾತನಾಡಿದರು. ಈ ಪ್ರತಿಭಟನೆಯ ನೇತೃತ್ವವನ್ನು ಕಾರ್ಯದರ್ಶಿ ರೇವಣ ಸಿದ್ದಪ್ಪ, ಯಲ್ಲಪ್ಪ, ವೇಣುಗೋಪಾಲ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.