ADVERTISEMENT

ಗಾಜಗಾರಪೇಟೆ ಮುಖ್ಯ ರಸ್ತೆ ದುರಸ್ತಿ ಎಂದು?

ನಗರ ಸಂಚಾರ

ರಾಮರಡ್ಡಿ ಅಳವಂಡಿ
Published 17 ಜೂನ್ 2013, 11:07 IST
Last Updated 17 ಜೂನ್ 2013, 11:07 IST
ರಾಯಚೂರು ಗಾಜಗಾರಪೇಟೆಯ ಮುಖ್ಯ ರಸ್ತೆಯಲ್ಲಿ ತಗ್ಗು ಗುಂಡಿಬಿದ್ದಿರುವುದು
ರಾಯಚೂರು ಗಾಜಗಾರಪೇಟೆಯ ಮುಖ್ಯ ರಸ್ತೆಯಲ್ಲಿ ತಗ್ಗು ಗುಂಡಿಬಿದ್ದಿರುವುದು   

ರಾಯಚೂರು: ನಗರದ ಹೃದಯ ಭಾಗವಾದ ಗಾಜಗಾರಪೇಟೆ ಬಡಾವಣೆಯ ಮುಖ್ಯ ರಸ್ತೆ(ನೇತಾಜಿನಗರ ಪೊಲೀಸ್ ಠಾಣೆಯಿಂದ ವಿವೇಕಾನಂದ ಸರ್ಕಲ್‌ವರೆಗೆ) ಹದಗೆಟ್ಟು ತಗ್ಗು ಗುಂಡಿಗಳು ನಿರ್ಮಾಣವಾಗಿವೆ.

ದ್ವಿಚಕ್ರವಾಹನ, ಕಾರ್, ಸೈಕಲ್, ಆಟೋಗಳು ಈ ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತವೆ !
ಸ್ವಲ್ಪ ಹೆಚ್ಚೇ ಡ್ಯಾನ್ಸ್ ಮಾಡಿದ್ರೆ ವಾಹನ ಮಗುಚಿ ಸವಾರರು ಗಾಯಗೊಂಡು ಆಸ್ಪತ್ರೆ ಸೇರುತ್ತಾರೆ. ನಗರದ ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶದ ರಸ್ತೆಗಳಲ್ಲಿ ವೇಗವಾಗಿ ಓಡುವ ವಾಹನಗಳು ಈ ರಸ್ತೆ ಸಮೀಪ ಬರುತ್ತಿದ್ದಂತೆಯೇ ನಾಜೂಕಿನಿಂದ ಚಲಿಸಬೇಕಾಗುತ್ತದೆ. ಇದು ಗಾಜಗಾಪೇಟೆ ಬಡಾವಣೆಯಲ್ಲಿ ನಿತ್ಯ ಕಾಣುವ ದೃಶ್ಯ.

ಬಡಾವಣೆ ಜನ, ಈ ರಸ್ತೆ ಮಾರ್ಗವಾಗಿ ತೆರಳುವ ಜನರು 50ರಿಂದ 100 ಮೀಟರ್ ರಸ್ತೆ ದುರಸ್ತಿಗೆ ಮನವಿ ಮಾಡಿ ಬೇಸತ್ತಿದ್ದಾರೆ. ಬಿಸಿಲು ಕಾಲದಲ್ಲಿ ದೂಳು, ಮಳೆಗಾಲದಲ್ಲಿ ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ನಿಂತ ನೀರಿನಲ್ಲಿಯೇ ಜನ, ವಾಹನ ಸಂಚಾರ. 

ಮೊದಲೇ ಇಕ್ಕಟ್ಟಾದ ರಸ್ತೆ. ಈ ರಸ್ತೆ ಪಕ್ಕ ತೆರೆದ ಚರಂಡಿಗಳಿವೆ. ಪಾದಚಾರಿಗಳು, ವಾಹನ ಸವಾರರು ಸ್ವಲ್ಪ ಆಯ ತಪ್ಪಿದ್ದರೂ ಚರಂಡಿಗೆ ಬೀಳುತ್ತಾರೆ. ಈ ರೀತಿ ಆಗುತ್ತಲೇ ಇರುತ್ತವೆ. ಬಿದ್ದು ಎದ್ದು ಸಾವರಿಸಿಕೊಂಡು ಜನ  ಹೋಗುತ್ತಾರೆ.

ಈಚೆಗೆ ನಡೆದ ನಗರಸಭೆ ಚುನಾವಣೆ, ವಿಧಾನಸಭೆ ಚುನಾವಣೆಗೆ ಮುನ್ನ ಈ ರಸ್ತೆಯಲ್ಲಿನ ತಗ್ಗು ಗುಂಡಿಗಳಿಗೆ ನಾಲ್ಕಾರು ಬುಟ್ಟಿ ಮಣ್ಣು ಸುರಿಯಲಾಗಿತ್ತು. ತಗ್ಗು ಗುಂಡಿಗಳು ಮುಚ್ಚಿ  ಜನರ ಕಣ್ಣಿಗೆ ಕಾಣದಂತಾಗಿದ್ದವು. ಆದರೆ, ಈಚೆಗೆ ಸುರಿದ ಮುಂಗಾರು ಪೂರ್ವ ಮಳೆಯ ಹೊಡೆತಕ್ಕೆತಗ್ಗು ಗುಂಡಿಗಳಿಗೆ ತುಂಬಿದ್ದ ಮಣ್ಣು ಕರಗಿ ಹೋಗಿದೆ. ಈಗ ಮತ್ತೆ ತಗ್ಗು ಗುಂಡಿಯಲ್ಲಿ ವಾಹನಗಳು ಡ್ಯಾನ್ಸ್ ಮಾಡಲು ಶುರು ಮಾಡಿವೆ.

ವಿಪರ್ಯಾಸವೆಂದರೆ ನಗರಸಭೆಯ 35 ವಾರ್ಡ್ ಸದಸ್ಯರಲ್ಲಿ ಅರ್ಧ ಭಾಗ ಸದಸ್ಯರು ಇದೇ ರಸ್ತೆ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ ಈ ಹದಗೆಟ್ಟ ರಸ್ತೆ ಯಾರ ಕಣ್ಣಿಗೂ ಕಂಡಿಲ್ಲ.  ನಗರದ ಅರ್ಧ ಭಾಗಕ್ಕೆ ಪ್ರಮುಖ ಸಂಪರ್ಕ ರಸ್ತೆಯೇ ಇದಾಗಿದೆ. ದುರಸ್ತಿ ಭಾಗ್ಯ ಮಾತ್ರ ಬಂದಿಲ್ಲ ಎಂದು ಬಡಾವಣೆ ಜನ, ರಸ್ತೆಯಲ್ಲಿ ಸಂಚರಿಸುವವರು ಬೇಸರ ವ್ಯಕ್ತಪಡಿಸುತ್ತಾರೆ.

ಸಂಪರ್ಕ ರಸ್ತೆ: ಜವಾಹರನಗರ, ಎನ್‌ಜಿಒ ಕಾಲೊನಿ, ಮಾಣಿಕಪ್ರಭು ಬಡಾವಣೆ, ಹರಿಜನವಾಡ, ಹನುಮಾನ  ಟಾಕೀಸ್, ತಿಮ್ಮಾಪುರಪೇಟೆ, ಬಿಆರ್‌ಬಿ ಕಾಲೇಜು, ಗದ್ವಾಲ್ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಹೀಗಾಗಿ ಶೀಘ್ರ ಈ ರಸ್ತೆ ದುರಸ್ತಿ ಮಾಡಬೇಕು.

ಇಲ್ಲದೇ ಇದ್ದರೆ ಇನ್ನಷ್ಟು ಹದಗೆಟ್ಟು ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ಆಗಲಿದೆ. ನಗರಸಭೆ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ಇನ್ನೂ ರಚನೆ ಆಗಿಲ್ಲ. ಆದರೆ, ಆಡಳಿತ ಯಂತ್ರದ ಅಧಿಕಾರಿ ವರ್ಗ ಸ್ವಲ್ಪ ಕಣ್ತೆರೆದು ನೋಡಬಾರದೇ ಎನ್ನುತ್ತಾರೆ ಈ ರಸ್ತೆಯಲ್ಲಿ ಸಂಚರಿಸುವ ಜನ ಮತ್ತು ವಾಹನ ಸವಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.