ADVERTISEMENT

ಚಾವಣಿ ಕುಸಿತ: ವಿದ್ಯಾರ್ಥಿಗಳಿಗೆ ಗಾಯ:ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2012, 5:55 IST
Last Updated 25 ಜುಲೈ 2012, 5:55 IST
ಚಾವಣಿ ಕುಸಿತ: ವಿದ್ಯಾರ್ಥಿಗಳಿಗೆ ಗಾಯ:ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಕರವೇ ಪ್ರತಿಭಟನೆ
ಚಾವಣಿ ಕುಸಿತ: ವಿದ್ಯಾರ್ಥಿಗಳಿಗೆ ಗಾಯ:ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಕರವೇ ಪ್ರತಿಭಟನೆ   

ಸಿಂಧನೂರು: ದುರಸ್ತಿಗೆ ತಲುಪಿದ್ದ ತಾಲ್ಲೂಕಿನ ಮಲ್ಲದಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ನಾಲ್ವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಎಂದಿನಂತೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಮುಗಿಸಿಕೊಂಡು ಕೊಠಡಿಯೊಳಗೆ ಪ್ರವೇಶಿಸುತ್ತಿರುವಾಗ ಸೀಳಿದ್ದ ಮೇಲ್ಛಾವಣಿ ಕುಸಿದು ಅವರ ಮೇಲೆ ಬಿದ್ದಿತು. ಪರಿಣಾಮ ತಾಯಮ್ಮ ಸಣ್ಣಬಸವರಾಜ, ಜ್ಯೋತಿ ಲಕ್ಷ್ಮಣ, ಲಕ್ಷ್ಮೀ ಗುಂಡಪ್ಪ ಹಾಗೂ ಮಾಂತಮ್ಮ ರಾಮಪ್ಪ ಎನ್ನುವ ವಿದ್ಯಾರ್ಥಿನಿಯರ ತಲೆ, ಕಾಲು ಮತ್ತಿತರ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು ಸ್ಥಳೀಯರು ಅವರನ್ನು ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಕರುಣೇಶಗೌಡ ಪ್ರಕರಣ ದಾಖಲಿಸಿಕೊಂಡರು.

ಆಗ್ರಹ: ಸಿಂಧನೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಪಾಲಕರೊಂದಿಗೆ ತೆರಳಿದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌ ಬಣ) ಕಾರ್ಯಕರ್ತರು ಬಿಇಒ ವೃಷಭೇಂದ್ರಯ್ಯಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕಟ್ಟಡವನ್ನು ನಿರ್ಮಿಸಿ ಅನೇಕ ವರ್ಷಗಳೇ ಗತಿಸಿವೆ. ಈಗ ಅದು ದುರಸ್ತಿಗೆ ತಲುಪಿದೆ.

ಗೋಡೆಗಳು ಸೀಳಿ ಮೇಲ್ಛಾವಣಿಯ ಕಬ್ಬಿಣದ ರಾಡ್‌ಗಳು ಹೊರಗೆ ಬಂದಿವೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಬಿಆರ್‌ಸಿ, ಸಿಆರ್‌ಸಿ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತರದೇ ಇರುವುದು ದುರಂತವೇ ಸರಿ. ಅವರ ಬೇಜವಾಬ್ದಾರಿತನಕ್ಕೆ ವಿದ್ಯಾರ್ಥಿಗಳು ಬಲಿಯಾಗಬೇಕೆ.

ಅವರ ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು. ಕರವೇ ತಾಲ್ಲೂಕು ಅಧ್ಯಕ್ಷ ಗಂಗಣ್ಣ ಡಿಶ್ ಹಳೆಯ ಕಟ್ಟಡದಿಂದ ಮಕ್ಕಳನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಿ ಬೋಧನೆ ಮಾಡಬೇಕು, ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯವಿಲ್ಲದ ಕಾರಣ ಗಾಯಗೊಂಡ ವಿದ್ಯಾರ್ಥಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿದರು.

ಭರವಸೆ: ಪ್ರತಿಭಟನಾಕಾರರನ್ನು ಸಮಾಧಾನಿಸಿದ ಬಿಇಒ ವೃಷಭೇಂದ್ರಯ್ಯಸ್ವಾಮಿ ಒಂದು ವಾರದೊಳಗೆ ಹೊಸ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು. ಇನ್ನುಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು. ಹಳೆಯ ಕಟ್ಟಡಗಳನ್ನು ಗುರುತಿಸಿ ಅಲ್ಲಿಂದ ವಿದ್ಯಾರ್ಥಿಗಳನ್ನು ಬೇರೆಡೆ ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.