ADVERTISEMENT

`ಜಗತ್ತು ಕಂಡ ಪವಾಡ ಪುರುಷ'

ಜಿಲ್ಲೆಯ ವಿವಿಧೆಡೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 10:52 IST
Last Updated 15 ಏಪ್ರಿಲ್ 2013, 10:52 IST
ರಾಯಚೂರಿನಲ್ಲಿ ಭಾನುವಾರ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ಧ ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಅವರು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಜಿ.ಪಂ ಸಿಇಓ ಟಿ ಜ್ಞಾನಪ್ರಕಾಶ, ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ ಬಿಸ್ನಳ್ಳಿ, ಸಹಾಯಕ ಆಯುಕ್ತೆ ಮಂಜುಶ್ರೀ ಹಾಗೂ ಇತರರಿದ್ದಾರೆ
ರಾಯಚೂರಿನಲ್ಲಿ ಭಾನುವಾರ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ಧ ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಅವರು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಜಿ.ಪಂ ಸಿಇಓ ಟಿ ಜ್ಞಾನಪ್ರಕಾಶ, ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ ಬಿಸ್ನಳ್ಳಿ, ಸಹಾಯಕ ಆಯುಕ್ತೆ ಮಂಜುಶ್ರೀ ಹಾಗೂ ಇತರರಿದ್ದಾರೆ   

ರಾಯಚೂರು: ಮಹಾಮಾನವತಾವಾದಿ, ಮಹಾ ದಾರ್ಶನಿಕ, ಜನಪರ ಚಿಂತಕ, ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್ ಅಂಬೇಡ್ಕರ್ ಅವರು ಜಗತ್ತು ಕಂಡ `ಪವಾಡ ಪುರುಷ' ಎಂದು  ಜಿಲ್ಲಾಧಿಕಾರಿ ಉಜ್ವಕುಮಾರ ಘೋಷ್ ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ಧ ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಗಮನಿಸಿದಾಗ ಒಬ್ಬ ವ್ಯಕ್ತಿ ಎಷ್ಟೊಂದು ಸಾಧನೆ ಮಾಡಲು ಸಾಧ್ಯವಿದೆಯಲ್ಲ ಎಂಬ ಬೆರಗು ಮೂಡಿಸುತ್ತದೆ. ಸಮಾಜದಲ್ಲಿ ಭೇದ-ಭಾವ ಹೋಗಲಾಡಿಸುವುದು, ಜಾತಿ ವ್ಯವಸ್ಥೆ ವಿರೋಧಿಸಿ ಹೋರಾಟ ನಡೆಸಿ ಸಮಾಜ ಸುಧಾರಕ ಕಾರ್ಯ ಮಾಡಿದರು.

ಪ್ರಾಧ್ಯಾಪಕ ಡಾ.ಶ್ರೀಮಂತ ಬಿ ಹೋಳಕರ್ ಮಾತನಾಡಿ, ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ ಮಹಾನ್ ರತ್ನ ಡಾ.ಬಿ.ಆರ್ ಅಂಬೇಡ್ಕರ್.  ಕಷ್ಟದ ಜೀವನ. ಶತ ಶತಮಾನಗಳಿಂದಲೂ ನೊಂದು ಬಂದ ಶೋಷಿತ ಕುಟುಂಬ ವರ್ಗದಲ್ಲಿ ಜನಿಸಿದ ಅಂಬೇಡ್ಕರ್ ಅವರು ವಿಶ್ವ ಮಟ್ಟದಲ್ಲಿ ಕಂಡ ಶ್ರೇಯಸ್ಸು ಗಮನಾರ್ಹ ಎಂದರು.

ಕಾಲೇಜು ವಿದ್ಯಾರ್ಥಿ ಶಿವಣ್ಣ ಡಾ.ಅಂಬೇಡ್ಕರ್ ಜೀವನ ಮತ್ತು ಕಾರ್ಯಗಳ ಬಗ್ಗೆ ಮಾತನಾಡಿದರು.

ಜಿ.ಪಂ ಸಿಇಓ ಟಿ ಜ್ಞಾನಪ್ರಕಾಶ, ಸಹಾಯಕ ಆಯುಕ್ತೆ ಮಂಜುಶ್ರೀ, ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ ಬಿಸ್ನಳ್ಳಿ, ಸಹಾಯಕ ಪೊಲೀಸ್ ಅಧೀಕ್ಷಕಿ ವಿದ್ಯಾ ಗೋಪಿನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿರಸಗಿಕರ್ ನಾಗಣ್ಣ, ನಗರಸಭೆ ಆಯುಕ್ತ ಮಂಜುನಾಥ್ ಎಲ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮೊದಲು ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ  ಅತಿಥಿಗಳು  ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ರಾಯಚೂರು ಜಿಲ್ಲೆ: ವಿವಿಧ ಸಂಘ ಸಂಸ್ಥೆಗಳಿಂದ ಭಾನುವಾರ ನಗರ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಹಾಗೂ ಗ್ರಾಮ ಪಂಚಾಯಿಗಳಲ್ಲಿ  ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಮಾಡಲಾಯಿತು.

ಜನಮಿತ್ರ ಸಂಸ್ಥೆ: ಇಲ್ಲಿನ ಜನಮಿತ್ರ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯವತಿಯಿಂದ ನೇತಾಜಿ ಬಡಾವಣೆಯಲ್ಲಿ  ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಸದಸ್ಯೆ ರಾಜೇಶ್ವರಿ ಅವರು ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಚಾಲನೆ ನೀಡಿದರು.

ನಂತರ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಕೆ.ಈರಣ್ಣ ಹಾಗೂ ಮತ್ತಿತರರಿದ್ದರು.

ಸಂಗೊಳ್ಳಿ ರಾಯಣ್ಣ ಯುವಸೇನೆ:  ಡಾ.ಬಿ.ಆರ್ ಅಂಬೇಡ್ಕರ್ ಜಯಂತ್ಯುತ್ಸವ ಅಂಗವಾಗಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಿ ನರೇಂದ್ರ ಪ್ರಸಾದ ಕಟ್ಟಿಮನಿ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.


ಯುವ ಸೇನೆ ಸಂಘಟನೆಯ ಪದಾಧಿಕಾರಿಗಳಾದ ನೀಲಪ್ಪರೆಡ್ಡಿ, ಸುನೀಲ್ ಸೌದಾಗರ್, ವೀರೇಶ ಕೆ, ನವೀನ್‌ಕುಮಾರ, ಪೂಜಾರಿ ಸೇರಿದಂತೆ ಇನ್ನು ಅನೇಕರು ಪಾಲ್ಗೊಂಡಿದ್ದರು.

ನವರತ್ನ ಯುವಕ ಸಂಘ: ಇಲ್ಲಿನ ಹರಿಜನವಾಡ ಬಡಾವಣೆಯ ಸಮುದಾಯ ಭವನದಲ್ಲಿ ನವರತ್ನ ಯುವಕ ಸಂಘ,ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಆಹಾರ ಇಲಾಖೆಯ ಅಧಿಕಾರಿ ಷಡಕ್ಷರಯ್ಯ ಸ್ವಾಮಿ ಮಾತನಾಡಿ, ಡಾ.ಅಂಬೇಡ್ಕರ್ ಅವರ ಆದರ್ಶಗಳ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ  ಮಾತ್ರ ಸಮಾಜದ ಪರಿವರ್ತನೆ ತರಲು ಸಾಧ್ಯ ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಯ ಮಾಲೀಕರಾದ ಗಣೇಶ ಪಾಳ್ಯಂ,  ಸಂಘದ ಅಧ್ಯಕ್ಷ ಎಸ್.ಹುಲಿಗೆಪ್ಪ, ಆಹಾರ ಇಲಾಖೆಯ ಅಧಿಕಾರಿಗಳಾದ ಸೂರ್ಯಪ್ರಕಾಶ, ಚಂದ್ರಶೇಖರರೆಡ್ಡಿ, ಹುಲಿಗೆಪ್ಪ ಕೊಲಿಮಿ,ಮಾರುತಿ, ಎಂ. ನರಸಪ್ಪ, ಡಿ.ಆಂಜನೇಯ, ಚಂದ್ರು ಭಂಡಾರಿ, ಲಕ್ಷ್ಮಿನಾರಾಯಣ ಭಂಡಾರಿ, ಸಿ.ಎಂ. ಜಂಬಣ್ಣ, ಸಮರ, ಸನ್ವಾ, ನರಸಿಂಹಲು, ಪಿ.ನಾಗರಾಜ, ಶಿವಪ್ಪ ಮಣಿಗೇರಿ, ಜಿ.ನರಸಿಂಹಲು ಎನ್.ನಾಗರಾಜ, ಎಸ್.ವೆಂಕಟೇಶ, ಆರ್. ಆಂಜನೇಯ ಇದ್ದರು.

ಕನ್ಯಿಕಾಪರಮೇಶ್ವರಿ ಹಾಸ್ಟೆಲ್ ಸಮಿತಿ: ನಗರದ ಕನಿಕಾಪರಮೇಶ್ವರಿ ಹಾಸ್ಟೆಲ್ ಸಮಿತಿಯ ಕೊಂಡಾ ಸರಸ್ವತಮ್ಮ ಹನುಮಂತಯ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಶಿಕ್ಷಕ ಬಸವರಾಜ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಉಪನ್ಯಾಸಕ ಎಸ್.ಬಿ ಕೊಡತಗೇರಿ ವಹಿಸಿದ್ದರು. ಉಪನ್ಯಾಸಕಿ ಸಂಗೀತಾ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಪೊಲೀಸ್ ಕಾಲೊನಿ ಶಾಲೆ: ಇಲ್ಲಿನ ಪೊಲೀಸ್ ಕಾಲೊನಿಯ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು  ಮುಖ್ಯಾಧ್ಯಾಪಕಿ  ವರಲಕ್ಷ್ಮಿ ವಹಿಸಿದ್ದರು.
ಅಖಿಲ ಕರ್ನಾಟಕ ಶಾಲಾ ಶಿಕ್ಷಕರ ಸಂಘದ ಜಿಲಲಾಧ್ಯಕ್ಷ ದಂಡಪ್ಪ ಬಿರಾದಾರ್,  ಶಿಕ್ಷಕರಾದ ರೇಣುಕಾದೇವಿ, ಸೌಭಾಗ್ಯ, ಪಾರ್ವತಿ, ಉಷಾ ಜಿ, ಅರುಣಜ್ಯೋತಿ, ಯೋಶೋಧಾಬಾಯಿ, ಗಿರಿಜಾ ಹಾಗೂ ಪ್ರಶಿಕ್ಷಣಾರ್ಥಿಗಳಾದ ರೇಣುಕಾ, ಶಂಶಾದ್ ಬೇಗಂ ಉಪಸ್ಥಿತರಿದ್ದರು.

ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ: ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಸ್‌ಸಿ,ಎಸ್‌ಟಿ  ಅಧಿಕಾರಿಗಳ ಮತ್ತು ನೌಕರರರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ವಿಭಾಗೀಯ ಕಚೇರಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಆರ್ ವೆಂಕಟೇಶ್ವರ ರೆಡ್ಡಿವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಎನ್.ರಂಗನಾಥ, ಎಂ.ಮಧುಚಕ್ರವರ್ತಿ,ಕೆ.ದೇವೇಂದ್ರಪ್ಪ, ಹನುಮಂತು, ಕೆ.ಶಿವಕುಮಾರ, ರಾಮಣ್ಣ, ಜಿ.ರಾಮಕುಮಾರ, ಎಚ್.ಎನ್ ಚಿನ್ನಕಾಸಿಂ, ಶರಣಪ್ಪ, ನಾಗರಾಜ ನಂದಿನ್ನಿ, ಎಸ್.ಬಾಬು, ಡಿ.ಮಹಾದೇವಪ್ಪ, ದಯಾನಂದ, ಸಿದ್ಧಪ್ಪ, ಈರಣ್ಣ, ಕಾರ್ಮಿಕ ಕಲ್ಯಾಣಾಧಿಕಾರಿ ಮಂಜುನಾಥ ಉಪಸ್ಥಿತರಿದ್ದರರು.

ದೂರ ಸಂಪರ್ಕ ಇಲಾಖೆ: ಇಲ್ಲಿನ ಭಾರತೀಯ ದೂರ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು. ದೂರ ಸಂಪರ್ಕ ಇಲಾಖೆಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ರಂಗನಾಥ, ನೌಕರರಾದ ರವಿಕುಮಾರ, ಚಾಂದಪಾಷಾ, ರಾಘವೇಂದ್ರ,ಎಂ.ಡಿ ಹನಿಫ್, ಮಲ್ಲಿಕಾರ್ಜುನ, ಸಂತೋಷ ಹಾಗೂ ಮತ್ತಿತರರಿದ್ದರು.

ಮಾನ್ವಿ ವರದಿ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ಅವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ವಿದ್ಯಾರ್ಥಿಗಳಾದ ವಿಶ್ವನಾಥ ಹಾಗೂ ಶ್ವೇತಾ ಅಂಬೇಡ್ಕರ್ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದರು. ಶಿಕ್ಷಕರಾದ ಯಲ್ಲಪ್ಪ, ಬಸವರಾಜ, ಶಾಹಿನಾ ಮತ್ತಿತರರು ಇದ್ದರು.

ಶಾರದಾ ಶಿಕ್ಷಣ ಸಂಸ್ಥೆ: ಪಟ್ಟಣದ ಶಾರದಾ ವಿದ್ಯಾನಿಕೇತನ ಡಿ.ಎಡ್.ಕಾಲೇಜಿನಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಿ.ಮಧುಸೂದನ ಗುಪ್ತಾ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಹನುಮಂತಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಉಪನ್ಯಾಸಕರಾದ ವೀರಭದ್ರಯ್ಯ ಸ್ವಾಮಿ, ಮಂಜುನಾಥ ನಾಯಕ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ, ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು. ಗಾಯತ್ರಿ ನಿರೂಪಿಸಿದರು. ಆಶ್ವಿನಿ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಗೀತಾ ಸ್ವಾಗತಿಸಿದರು. ಅಶ್ವಿನಿರಾಣಿ ವಂದಿಸಿದರು.

ಮದ್ಲಾಪುರ: ತಾಲ್ಲೂಕಿನ ಮದ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಂದೇ ಮಾತರಂ ಯುವಕ ಸಂಘದ ವತಿಯಿಂದ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಸಂಘದ ಪ್ರಧಾನ ಕಾರ್ಯದರ್ಶಿ ಎಮ್.ಎಸ್.ಮರಿಸ್ವಾಮಿ ಭೋವಿ ಮಾತನಾಡಿ, ಶೈಕ್ಷಣಿಕ ಪ್ರಗತಿಯಿಂದ ಅಸ್ಪೃಷ್ಯತೆ ನಿವಾರಣೆ ಸಾಧ್ಯ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಯೂಸೂಫ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಮಹಿಬೂಬ್, ಸದಸ್ಯರಾದ ಬಸಪ್ಪ ಗುಡದಿನ್ನಿ, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಮಾಚನೂರು, ರೆಡ್ಡೆಪ್ಪ, ಶರಣಯ್ಯ ಸ್ವಾಮಿ, ಲಾಜರ್, ರಾಜುಪ್ರಸಾದ, ಯಂಕಪ್ಪ ಗೋರ್ಕಲ್ ಮತ್ತಿತರರು ಉಪಸ್ಥಿತರಿದ್ದರು. ಮಹಿಬೂಬ್ ನಿರೂಪಿಸಿದರು.

ಮಸ್ಕಿ ವರದಿ: ಡಾ. ಬಿ.ಆರ್. ಅಂಬೇಡ್ಕರ್ ಅವರ 122ನೇ ಜಯಂತಿ ಅಂಗವಾಗಿ ಇಲ್ಲಿಯ ಹಳೇ ಬಸ್‌ನಿಲ್ದಾಣದ ಬಳಿ ಇರುವ ಅಂಬೇಡ್ಕರ್ ಅವರ ಪುತ್ಥಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರೇಶ ಮಸ್ಕಿ ಭಾನುವಾರ ಹೂ ಮಾಲೆ ಹಾಕುವ ಮೂಲಕ ಗೌರವ ಸಲ್ಲಿಸಿದರು.

ದಲಿತ ಮುಖಂಡರಾದ ಸಿ. ದಾನಪ್ಪ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪುರ, ನಾಗಪ್ಪ ಚಿಗರಿ, ನಾಗಪ್ಪ ತತ್ತಿ, ಮಲ್ಲಯ್ಯ ಮುರಾರಿ, ರವಿಕುಮಾರ ಮಡಿವಾಳ, ಸಂಗಣ್ಣ ಕುಂಬಾರ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರ ಒಡೆಯರ್, ಕಿರಣ್ ಮುರಾರಿ, ಬಸವರಾಜ ಕೆಳಗೇರಿ, ಎಂ.ಡಿ. ಮಲ್ಲು, ರಕ್ಷಣಾ ವೇದಿಕೆಯ ಅಧ್ಯಕ್ಷ ಅಶೋಕ ಮುರಾರಿ, ಸಿದ್ದು ಮುರಾರಿ, ಹನುಮಂತ ಬಾಲಗವಿ ಹೂ ಮಾಲೆ ಹಾಕಿ ಗೌರವ ಸಲ್ಲಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತಪ್ಪ ಮೋಚಿ, ಕೆಜೆಪಿ ಅಭ್ಯರ್ಥಿ ಮಹಾದೇವಪ್ಪಗೌಡ ಪೊ, ಪಾಟೀಲ, ಕೆ. ವೀರನಗೌಡ, ಕಾಂಗ್ರೆಸ್ ಮುಖಂಡ ಪ್ರಸನ್ನ ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕ್ರಪ್ಪ ಮೋಚಿ, ಬಸವರಾಜ ಕ್ವಾಟಿ ಮತ್ತಿತರರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲೆ ಹಾಕಿ ನಮನ ಸಲ್ಲಿಸಿದರು.

ಸಿಂಧನೂರು ವರದಿ: ಭಾರತೀಯ ಜನತಾ ಪಾರ್ಟಿಯಿಂದ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ತಮ್ಮ ಕಾರ್ಯಾಲಯದಲ್ಲಿ ಆಚರಿಸಿತು. ಬಿಜೆಪಿ ಸಿಂಧನೂರು ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್ ನೇತೃತ್ವದಲ್ಲಿ ಹಲವು ಮುಖಂಡರು ಪಿ.ಡಬ್ಲ್ಯೂ.ಡಿ.ಕ್ಯಾಂಪ್‌ನಲ್ಲಿರುವ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಕಾರ್ಯಾಲಯಕ್ಕೆ ಆಗಮಿಸಿದ ನಂತರ ಸರಳ ಸಮಾರಂಭದಲ್ಲಿ ಕೊಲ್ಲಾ ಶೇಷಗಿರಿರಾವ್ ಅವರು ಅಂಬೇಡ್ಕರ್ ಅವರ ಜೀವನ ಸಾಧನೆಗಳ ಬಗ್ಗೆ ಮಾತನಾಡಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಮರೇಗೌಡ ವಿರುಪಾಪುರ ಅಂಬೇಡ್ಕರ್ ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳನ್ನು ಸ್ಮರಿಸಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ ಮಾತನಾಡಿದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಧ್ವರಾಜ್ ಆಚಾರ್, ಮುಖಂಡರಾದ ರಾಮಕೊಟೇಶ್ವರರಾವ್, ಶಿವಬಸನಗೌಡ, ದೇವೇಂದ್ರಪ್ಪ ಯಾಪಲಪರ್ವಿ, ಬಸಪ್ಪ ಕಲ್ಲೂರು ಮತ್ತಿತರರು ಭಾಗವಹಿಸಿದ್ದರು.

ಬಳಗಾನೂರು ಗ್ರಾಮ ಪಂಚಾಯಿತಿ: ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿ ದಲಿತರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಕ್ಕುಗಳನ್ನು ತಂದುಕೊಡುವಲ್ಲಿ ಜೀವನ ಸವೆಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಹೋರಾಟ ಮನೋಭಾವನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ದಲಿತ ಮುಖಂಡ ಬಿ.ತಿಕ್ಕಯ್ಯ ಕರೆ ನೀಡಿದರು.

ತಾಲ್ಲೂಕಿನ ಬಳಗಾನೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರರ 122ನೇ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂವಿಧಾನದ ಮೂಲಕ ದಲಿತರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ಅವರ ತತ್ವಾದರ್ಶಗಳು ಅನುಕರಣೀಯ ಎಂದರು.

ಪತ್ರಕರ್ತ ಡಾ.ಎಸ್.ಎಸ್.ಜಾಗೀರದಾರ, ವಿರುಪಣ್ಣ ಗುತ್ತೇದಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್.ಮಹಾಬಳೇಶ, ಸದಸ್ಯರಾದ ಗಣೇಶ ಡಿಶ್, ಮಹೆಬೂಬಪಾಷ, ಹನುಮೇಶ ಹೂಗಾರ, ಇಸ್ಮಾಯಿಲ್‌ಸಾಬ ಚೌದ್ರಿ, ಟಿ.ಅಮರೇಶ ನಾಯಕ, ತಿಪ್ಪಣ್ಣ ನಾಯಕ, ಮರಿಯಪ್ಪ ಮೂಲಿಮನಿ, ನಾಗಬುಸ್ಸಪ್ಪ, ಕಾರ್ಯದರ್ಶಿ ಸಂಗಪ್ಪ ಸವಡಿ, ಪಂಪಾಪತಿ ನಾಯಕ, ಮಲ್ಲಿಕಾರ್ಜುನ ಹಾಲಾಪುರ ಮತ್ತಿತರರು ಇದ್ದರು.

ಗ್ರಾಮದ ವಾರ್ಡ್ ನಂ.1ರಲ್ಲಿ ಅಂಬೇಡ್ಕರ್ ಯುವಕ ಮಂಡಳಿಯಿಂದ ಜಯಂತಿಯನ್ನು ಆಚರಿಸಲಾಯಿತು. ಹಾಗೆಯೇ ವಾರ್ಡ್ ನಂ.3ರ ಅಂಬೇಡ್ಕರ್ ವೃತ್ತದ ನಾಮಫಲಕಕ್ಕೆ ಮುಖಂಡ ವಿರುಪಣ್ಣ ಗುತ್ತೇದಾರ, ಡಾ.ರುದ್ರಪ್ಪ ಪಲ್ಲೇದ್ ಮಾಲಾರ್ಪಣೆ ಮಾಡಿದರು.

ಜಯಂತಿ ನಿರ್ಲಕ್ಷ್ಯ: ಗ್ರಾಮದ ಕೃಷಿ ಇಲಾಖೆ ಕಚೇರಿ, ಸಾರ್ವಜನಿಕ ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸದೆ ನಿರ್ಲಕ್ಷ್ಯ ವಹಿಸಿದ್ದು ಕಂಡುಬಂತು. ಜಯಂತಿ ಕಡೆಗಣಿಸಿ ಬೇಜವಾಬ್ದಾರಿ ಮೆರೆದ ಇವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಡಿಎಸ್‌ಎಸ್ ಮುಖಂಡ ಎಂ.ಸುರೇಶ ಒತ್ತಾಯಿಸಿದ್ದಾರೆ.

ಜಾಲಹಳ್ಳಿ ವರದಿ: ದೇಶ ಕಂಡ ಅತ್ಯುನ್ನತ ನಾಯಕರಲ್ಲಿ ಡಾ.ಬಿಆರ್ ಅಂಬೇಡ್ಕರ್‌ರವರು ಕೂಡ ಒಬ್ಬರಾಗಿದ್ದಾರೆ. ಅವರು ಸಮಾಜದಲ್ಲಿ ತುಳಿತಕ್ಕೊಳಗಾದ ಶೋಷಿತ ವರ್ಗದ ಆಶಾಕಿರಣವಾಗಿದ್ದಾರೆ ಎಂದು ಸ್ಥಳೀಯ ದಲಿತ ಸಂಘಟನೆಯ ಮುಖಂಡ ಮೇಲಪ್ಪ ಭಾವಿಮನಿ ಹೇಳಿದರು.

ಅವರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಡಾ.ಬಿಆರ್ ಅಂಬೇಡ್ಕರ್‌ರವರ 122 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಅಂಬೇಡ್ಕರ್‌ರವರು ರಚಿಸಿದ ಸಂವಿಧಾನದಿಂದಾಗಿ ಸಮಾಜದಲ್ಲಿರುವ ಪ್ರತಿಯೊಬ್ಬರೂ ಕೂಡ ತಮ್ಮ ಹಕ್ಕುಗಳನ್ನು ಹೊಂದುವಂತಾಗಿದೆ. ಸಮಾನತೆಗಾಗಿ ನಿರಂತರ ಶ್ರಮಿಸಿದ ಅವರು ತಮ್ಮ ಜೀವನವನ್ನು ಅತ್ಯಂತ ಕಷ್ಟದಾಯಕವಾಗಿ ನಿಭಾಯಿಸಿ ಉನ್ನತ ಸ್ಥಾನಕ್ಕೇರಿದ್ದಾರೆ ಎಂದು ತಿಳಿಸಿದರು.

ಗ್ರಾ.ಪಂ ಸದಸ್ಯರಾದ ತಿಪ್ಪಯ್ಯ ನಾಯಕ, ಚಂದಪ್ಪ ಭಾವಿಮನಿ, ಎಎಸ್‌ಐ ಮಹ್ಮದ ಅಲಿಮ್, ದಲಿತ ಮುಖಂಡರಾದ ಎನ್.ಲಿಂಗಪ್ಪ, ಹುಸೇನಪ್ಪ ಗುತ್ತಿಗೆದಾರ, ಗುಂಡಪ್ಪ, ನರಸಪ್ಪ ನ್ಯಾಯವಾದಿ ಚಿಂಚೋಡಿ, ಬಾಳಪ್ಪ ಭಾವಿಮನಿ, ಸಾಬಣ್ಣ ಕಮ್ಮಲದಿನ್ನಿ, ಯಲ್ಲಪ್ಪ ಗಚ್ಚಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT