ಕವಿತಾಳ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹೇಳಿದ್ದಾಯ್ತು ಯಾರೂ ಕ್ಯಾರೇ ಅನ್ನಲಿಲ್ಲ ಬೇಸತ್ತ ರೈತರು ತಮ್ಮ ಸ್ವಂತ ಹಣದಲ್ಲಿಯೇ ರಸ್ತೆ ದುರಸ್ತಿಗೆ ಮುಂದಾದರು ಕೊನೆಗೆ `ಯಾರೂ ರಸ್ತೆ ದುರಸ್ತಿ ಮಾಡದಿದ್ದರೂ ಪರ್ವಾಗಿಲ್ಲ ನಾವು ದುರಸ್ತಿ ಮಾಡಿದ ನಂತರ ರಸ್ತೆ ಹೆಸರಿನಲ್ಲಿ ಸರ್ಕಾರದ ಹಣ ಕೊಳ್ಳೆ ಹೊಡೆಯಬಾರದು~ ಎಂದು ಆಕ್ರೋಶ ಹೊರ ಹಾಕಿದರು.
ಮಸ್ಕಿ ವಿಧಾನಸಭೆ ಕ್ಷೇತ್ರ, ಬ್ಯಾಗವಾಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲದಗುಡ್ಡ ಕ್ಯಾಂಪ್‌ನಿಂದ ಡೊಣಮರಡಿ ಮತ್ತು ಸುಂಕನೂರು ಗ್ರಾಮಗಳಿಗೆ ಸಂಪರ್ಕಿಸುವ ಭತ್ತದ ಗದ್ದೆಗಳಿಗೆ ಹೋಗಲು ಉಪಯೋಗಿಸುವ ಅಂದಾಜು 4 ಕಿ.ಮೀ. ಉದ್ದದ ರಸ್ತೆಯನ್ನು ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಎರಡನೇ ಬಾರಿಗೆ ಸ್ವಂತ ಹಣದಲ್ಲಿ ರೈತರು ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಇದೇ ರಸ್ತೆಯನ್ನು ರೈತರು ದುರಸ್ತಿ ಮಾಡಿಕೊಂಡಾಗ ವ್ಯಕ್ತಿಯೊಬ್ಬರು ಸರ್ಕಾರದಿಂದ ಹಣ ಪಡೆದಿದ್ದರು ಎಂದು ರೈತರು ಗಂಭೀರವಾದ ಆರೋಪ ಮಾಡಿದ್ದಾರೆ. ಮಳೆಯಾದರೆ ತಿರುಗಾಡಲು ಬರುವುದಿಲ್ಲ ಹೀಗಾಗಿ ರಸ್ತೆಯನ್ನು ತಕ್ಷಣ ರಿಪೇರಿ ಮಾಡಿಕೊಳ್ಳುವುದು ಅನಿವಾರ್ಯ ಹೀಗಾಗಿ 16ಟ್ರ್ಯಾಕ್ಟರ್‌ಗಳು, ಹಿಟಾಚಿ ಯಂತ್ರ, 30-40ಜನ ಕೂಲಿ ಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟು ರೂ.4-5ಲಕ್ಷ ಖರ್ಚಾಗಬಹುದು ಎನ್ನುತ್ತಾರೆ ರೈತರು.
ಮಸ್ಕಿ ಶಾಸಕರು ಕ್ಯಾಂಪ್‌ಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದಾರೆ ಹೀಗಾಗಿ ರಸ್ತೆ ರಿಪೇರಿ ಮಾಡಿಕೊಡುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಕೇಳಿದರೆ ಸ್ಪಂದಿಸಿಲ್ಲ ಎನ್ನುವುದು ರೈತರ ಆರೋಪ.
ಟ್ರ್ಯಾಕ್ಟರ್‌ಗಳಿಗೆ ಬೇಕಾಗುವಷ್ಟು ಡಿಸೇಲ್ ಖರ್ಚಾದರೂ ಕೊಡಿ ಎಂದರೂ ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಕ್ಯಾಂಪ್ ನಿವಾಸಿಗಳಾದ ಸುಬ್ಬಾರಾವ್ ಇತರರು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ರಸ್ತೆ ದುರಸ್ತಿಗೆ ಅವಕಾಶ ಇದ್ದಾಗ್ಯೂ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಕಡೆಗಣಿಸಿದರು ಎನ್ನುವುದು ಪಂಚಾಯಿತಿ ಸದಸ್ಯನ ಆರೋಪ. ತಮ್ಮ ಕ್ಯಾಂಪ್‌ನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಇದುವರೆಗೂ ಯಾವುದೇ ಅಭಿವೃದ್ದಿ ಕೆಲಸ ಕೈಗೊಂಡಿಲ್ಲ ಎಂದು ಎನ್.ಎ.ರಾಮರಾವ್, ಕೆ.ಸೋಮರಾಜು, ಟಿ.ವೆಂಕಟರಾವ್, ಎಂ.ಪುರುಷೋತ್ತಮರೆಡ್ಡಿ ಮತ್ತು ಸುಬ್ಬಾರಾವ್ ಇತರರು ಆರೋಪ ಮಾಡಿದ್ದಾರೆ.
ಭರವಸೆ: ಸರ್ಕಾರದ ಅನುದಾನ ಲಭ್ಯವಾದರೆ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು, ರೈತರು ಮರಂ ಹಾಕಿಕೊಂಡರೆ ಮುಂದೆ ಮೆಟಲಿಂಗ್ ಮಾಡುವ ಮೂಲಕ ರಸ್ತೆಯನ್ನು ಅಭಿವೃದ್ದಿ ಪಡಿಸುವುದಾಗಿ ಪೊತ್ನಾಳ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ವಿಶ್ವನಾಥ ಪಾಟೀಲ್ ತೋರಣದಿನ್ನಿ ಪತ್ರಿಕೆಗೆ ತಿಳಿಸಿದ್ದಾರೆ.
ಶನಿವಾರವಷ್ಟೆ ರಸ್ತೆ ದುರಸ್ತಿ ಬಗ್ಗೆ ರೈತ್ಟರು ಮಾಹಿತಿ ನೀಡಿದ್ದಾರೆ ತತಕ್ಷಣ ದುರಸ್ತಿ ಕೈಗೊಳ್ಳಲು ಸಾಧ್ಯವಿಲ್ಲ ಸರ್ಕಾರದ ಲಭ್ಯ ಅನುದಾನದಡಿ ಬೇರೆ ಬೇರೆ ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ ಸದ್ರಿ ರಸ್ತೆಗೂ ಆದ್ಯತೆ ನೀಡುವುದಾಗಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.