ADVERTISEMENT

ಜಿಲ್ಲೆಗೆ ಸರ್ಕಾರದ ಕೊಡುಗೆ ಶೂನ್ಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 7:05 IST
Last Updated 1 ಜೂನ್ 2011, 7:05 IST

ಮಾನ್ವಿ: `ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ  ಕಳೆದ ಮೂರು ವರ್ಷಗಳಿಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ~ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎನ್.ಎಸ್. ಬೋಸರಾಜು ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೊಸದಾಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳನ್ನು ಆರಂಭಿಸುವಲ್ಲಿ ನಿರ್ಲಕ್ಷ್ಯವಹಿಸಲಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು ಕಡುಬಡವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಕೆಶಿಪ್ ವತಿಯಿಂದ ಅಭಿವೃದ್ಧಿಪಡಿಸಲಾದ ರಸ್ತೆಗಳು ನಿರ್ವಹಣೆ ಇಲ್ಲದೇ ಸಂಪೂರ್ಣ ಹಾಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಯೋಜನೆ ರೂಪಿಸಿಲ್ಲ.

ರೈತರ ನೆರವಿಗೆ ಹಳೆಯ ಏತನೀರಾವರಿ ಯೋಜನೆಗನ್ನು ಪೂರ್ಣಗೊಳಿಸಿಲ್ಲ. ಬತ್ತದ ದರ ಕುಸಿತದಿಂದ ಜಿಲ್ಲೆಯ ರೈತರು ಕಂಗಾಲಾಗ್ದ್ದಿದು ಬೆಂಬಲ ಬೆಲೆ ನೀಡಿ ಬತ್ತ ಖರೀದಿ ಕೇಂದ್ರಗಳನ್ನು ಆರಂಭಿಸುವಲ್ಲಿ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಆರೋಪಿಸಿದರು.

ನೆರೆಹಾವಳಿಯಿಂದ ಹಾನಿಗೀಡಾದ ಗ್ರಾಮಗಳ ಸ್ಥಳಾಂತರದಲ್ಲಿ ವಿಳಂಬವಾಗುತ್ತಿದೆ. ಸರ್ಕಾರದ ವತಿಯಿಂದ ನಿರ್ಮಿಸಲಾಗುತ್ತಿರುವ `ಆಸರೆ~ ಮನೆಗಳು ಇನ್ನೂ ಪೂರ್ಣಗೊಂಡಿಲ್ಲ. ಆದರೆ ಸಂತ್ರಸ್ತರಿಗಾಗಿ ದಾನಿಗಳು ನಿರ್ಮಿಸಿದ ಮನೆಗ ವಿತರಣೆಯನ್ನು ಸರ್ಕಾರ ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ಅವರು ದೂರಿದರು.

ತುಂಗಭದ್ರಾ ಎಡದಂಡೆ ನಾಲೆ ದುರಸ್ತಿ ಕಾರ್ಯ ಆರಂಭವಾಗಿದ್ದರೂ ಕಾಮಗಾರಿ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಏಜೆನ್ಸಿಗಳನ್ನು ನೇಮಕಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆವರು ಟೀಕಿಸಿದರು.
ಶಾಸಕ ಜಿ. ಹಂಪಯ್ಯ ನಾಯಕ, ಕಾಂಗ್ರೆಸ್ ಮುಖಂಡರಾದ ಅಯ್ಯನಗೌಡ ಜಂಬಲದಿನ್ನಿ, ರಾಜಾ ವಸಂತ ನಾಯಕ, ಗಂಗಣ್ಣ ನಾಯಕ, ಶಂಕ್ರಯ್ಯ ಸ್ವಾಮಿ ಸುವರ್ಣಗಿರಿಮಠ, ಶಾಹಿದ್ ಖಾದ್ರಿ, ಖಾಲೀದ್ ಖಾದ್ರಿ, ರೌಡೂರು ಮಹಾಂತೇಶ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.