ADVERTISEMENT

ಟ್ಯಾಂಕರ್ ಮೂಲಕ ಗದ್ದೆಗೆ ನೀರು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 9:34 IST
Last Updated 13 ಏಪ್ರಿಲ್ 2013, 9:34 IST

ಸಿಂಧನೂರು: ತುಂಗಭದ್ರ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಬತ್ತದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಬೆಳೆ ಉಳಿಸಿಕೊಳ್ಳಲು ಹಣಕೊಟ್ಟು ಟ್ಯಾಂಕರ್ ಮೂಲಕ ರೈತರು ಗದ್ದೆಗಳಿಗೆ ನೀರು ಹರಿಸಿಕೊಳ್ಳುವಂತಾಗಿದೆ.

ನೀರಾವರಿ ಇಲಾಖೆಯವರು ನೀಡಿದ ಮುನ್ಸೂಚನೆಯಂತೆ ಏ.6ರಂದು ಎಡದಂಡೆ ನಾಲೆಗೆ ನೀರು ಸ್ಥಗಿತಗೊಳಿಸಲಾಗಿದೆ. ಈ ನೀರನ್ನೇ ನಂಬಿ ಬೆಳೆದ ಬತ್ತ ತೆನೆ ಬಿಡುವ ಹಂತದಲ್ಲಿದ್ದು ಇನ್ನು ಕೆಲ ದಿನಗಳವರೆಗೆ ನೀರು ಹರಿಸುವುದು ಅನಿವಾರ್ಯವಾಗಿದೆ. ಆದರೆ ಕಾಲುವೆಗೆ ನೀರಿನ ಹರಿವು ಸ್ಥಗಿತಗೊಂಡಿರುವುದರಿಂದ ರೈತರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ಇನ್ನು ಹೇಗಾದರೂ ಮಾಡಿ ತಮ್ಮ ಬೆಳೆಯನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ನೀರಿನ ಟ್ಯಾಂಕರ್ ಮೊರೆ ಹೋಗಿದ್ದಾರೆ.

ತಾಲ್ಲೂಕಿನ ಬಳಗಾನೂರು ವ್ಯಾಪ್ತಿಯಲ್ಲಿ ಸುಮಾರು 50ಎಕರೆಗೂ ಹೆಚ್ಚಿನ ಪ್ರಮಾಣದಲ್ಲಿ ಬತ್ತ ಬೆಳೆಯಲಾಗಿದ್ದು, ನೀರಿಲ್ಲದೆ ಬಾಡಿ ಹೋಗುತ್ತಿದೆ. ಈ ಕಾರಣ ರೈತರು ಬೋರ್‌ವೆಲ್ ಹೊಂದಿರುವವರನ್ನು ಮನವೊಲಿಸಿ ಟ್ಯಾಂಕರ್ ಮಾಲೀಕರಿಗೆ ಹಣಕೊಟ್ಟು ನೀರು ತೆಗೆದುಕೊಳ್ಳುತ್ತಿದ್ದಾರೆ. ಟ್ಯಾಂಕರ್ ಮಾಲೀಕರಿಗೆ ಒಂದು ದಿನಕ್ಕೆ 2500ರಿಂದ 3 ಸಾವಿರದವರೆಗೆ ಹಣ ಕೊಟ್ಟು 10ರಿಂದ 12 ಟ್ರಿಪ್ ನೀರು ಗದ್ದೆಗೆ ಹರಿಸುತ್ತಿದ್ದಾರೆ. ಒಂದು ವೇಳೆ ಕರೆಂಟ್ ಕೈಕೊಟ್ಟರೆ ಅದೂ ಇಲ್ಲ ಎಂಬ ಸ್ಥಿತಿ.

ಮೂರು ಹಂತದಲ್ಲಿ ಗದ್ದೆಗೆ ನೀರು ಹರಿಸಿ, ಸಾವಿರಾರು ರೂಪಾಯಿ ಖರ್ಚು ಮಾಡಿ ಗೊಬ್ಬರ, ಕ್ರಿಮಿನಾಶಕ ಹಾಕಿ ಬತ್ತ ಬೆಳೆಯಲಾಗಿದೆ. ಆದರೆ ತೆನೆ ಕಟ್ಟುವ ಸಮಯದಲ್ಲಿ ಈ ರೀತಿ ನೀರಿನ ಸಮಸ್ಯೆ ಉದ್ಭವಿಸಿರುವುದು ತಮ್ಮನ್ನು ನಿದ್ದೆಗೆಡಿಸಿದೆ ಎನ್ನುತ್ತಾರೆ ಬಳಗಾನೂರಿನ ರೈತ ಹನುಮಂತಪ್ಪ ಮಡಿವಾಳರ್.

ನಷ್ಟದ ಭೀತಿ: ನೀರಾವರಿ ಇಲಾಖೆಯ ಸೂಚನೆಗೆ ಕಿವಿಗೊಡದೆ ಬತ್ತ ಬೆಳೆದ ರೈತರು ನಷ್ಟದ ಭೀತಿಯಲ್ಲಿದ್ದಾರೆ. ಮೇಲ್ಭಾಗದ ರೈತರು ಕೆಳಭಾಗದವರಿಗಿಂತ ಮುಂಗಡವಾಗಿ ಬತ್ತ ನಾಟಿ ಮಾಡಿರುವುದರಿಂದ ಅವರ ಬೆಳೆ ಈಗಾಗಲೇ ತೆನೆಬಿಟ್ಟಿದ್ದು ನಿರೀಕ್ಷಿತ ಪ್ರಮಾಣದಲ್ಲಿ ಅಲ್ಲದಿದ್ದರೂ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ಆದರೆ ಮೇಲ್ಭಾಗದವರನ್ನು ಅನುಸರಿಸಿ ಟೇಲ್ಯಾಂಡ್ ರೈತರು ಸ್ವಲ್ಪ ತಡವಾಗಿ ಬತ್ತ ಬೆಳೆದಿದ್ದು, ಇಕ್ಕಟ್ಟಿಗೆ ಸಿಲುಕಿ ಒದ್ದಾಡುವಂತಾಗಿದೆ. ಹೀಗಾಗಿ ಅವರು ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ಹಣ ಕೊಟ್ಟು ನೀರು ಖರೀದಿಸುತ್ತಿದ್ದಾರೆ. ಬೆಳೆ ಕಾಪಾಡುವ ಹಿನ್ನೆಲೆಯಲ್ಲಿ ರೈತರು ಹರಸಾಹಸ ನಡೆಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸಲು ಮುಂದಾಗಬೇಕು ಎಂಬುದು ಬಳಗಾನೂರು ರೈತರಾದ ರಾಜಶೇಖರ ಶಂಕರಬಂಡಿ, ಸಂತೋಷ ಅಂಬ್ಲಿ, ಸೂಗಪ್ಪ ಸಜ್ಜನ್, ರೆಹಮಾನ್‌ಸಾಬ ಬಂಕದಮನೆ, ನಾಗಬುಸ್ಸಪ್ಪ ಅವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.