ADVERTISEMENT

ಡಿ.17ರಂದು ರಸ್ತೆತಡೆ

ದೂಳು ನಿಯಂತ್ರಣ, ಡಾಂಬರೀಕರಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:18 IST
Last Updated 12 ಡಿಸೆಂಬರ್ 2013, 8:18 IST

ಸಿಂಧನೂರು: ದೂಳು ನಿಯಂತ್ರಣಗೊ­ಳಿಸುವ ಹಿನ್ನೆಲೆಯಲ್ಲಿ ನಗರದ ಗಾಂಧಿ ಸರ್ಕಲ್‌ನಿಂದ ಅಗ್ನಿಶಾಮಕ ಠಾಣೆ­ವರೆಗೆ  ಡಾಂಬರೀಕರಣ­ಗೊಳಿಸು­ವಂತೆ ಒತ್ತಾಯಿಸಿ ಡಿ. 17ರಂದು ಗಾಂಧಿ ಸರ್ಕಲ್‌ನಲ್ಲಿ ಬೆಳಿಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ರಸ್ತೆತಡೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಹೋರಾಟ ಸಮಿತಿ ಈಚೆಗೆ ಸಭೆ ನಡೆಸಿ ತೀರ್ಮಾನಿಸಿತು.

ನಗರಸಭೆ ಸಭೆಯ ಸಭಾಂಗಣ­ದಲ್ಲಿ ನ. 17ರಂದು ಜಿಲ್ಲಾಧಿಕಾರಿ ಮತ್ತು ಶಾಸಕ ಹಂಪನಗೌಡ ಬಾದರ್ಲಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರದ ಹಕ್ಕೊತ್ತಾಗಳನ್ನು ಮುಂದಿಡಲಾಗಿತ್ತು.

ಪ್ರಮುಖವಾಗಿ ಕುಷ್ಟಗಿ ರಸ್ತೆಯನ್ನು ದೂಳುಮುಕ್ತ­ಗೊಳಿಸಲು ಡಾಂಬರ್‌ ಹಾಕುವಂತೆ ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಒಮ್ಮತ ಸೂಚಿಸಿ ಕೆಲಸ ಶೀಘ್ರ ಪ್ರಾರಂಭಿಸುವುದಾಗಿ ಭರವಸೆ ನೀಡಿ ಮಾತು ತಪ್ಪಿದ್ದರಿಂದ ರಸ್ತೆ ತಡೆ ಚಳವಳಿ ಮಾಡುವುದು ಅನಿವಾರ್ಯ­ವಾಗಿದೆ ಎಂದು ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಹನುಮನಗೌಡ ಬೆಳಗುರ್ಕಿ ತಿಳಿಸಿದರು.

ವಿವಿಧ ವಾರ್ಡ್‌ಗಳಿಗೆ ಮೊರಂ ಹಾಕಿದ್ದು ಹೊರತುಪಡಿಸಿ ಪ್ರಮುಖ ರಸ್ತೆಗಳಿಗೆ ಸಣ್ಣಪುಟ್ಟ ಕಾಮಗಾರಿ ನಡೆಸಲಾಗಿದೆ.
ಶಾಸಕರ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಕೆಎಸ್‌ಆರ್‌­ಡಿಸಿಎಲ್‌ ಅಧಿಕಾರಿ ಶಿವಯೋಗಿ ಡೊಳ್ಳಿನ್ ಡಿಸೆಂಬರ್‌ 1ರ ಒಳಗಾಗಿ ಡಾಂಬರ್‌ ಹಾಕುವುದಾಗಿ ಭರವಸೆ ನೀಡಿದ್ದರು. ಈ ಕಾರಣ ನವೆಂಬರ್‌ 21ರಂದು ಸಮಿತಿ ಕರೆ ನೀಡಿದ್ದ ಸಿಂಧನೂರು ಬಂದ್‌ ತಾತ್ಕಾಲಿಕವಾಗಿ ವಾಪಸ್ಸು ಪಡೆಯಲಾಗಿತ್ತು. ಶಾಸಕರ ಸಮ್ಮುಖದಲ್ಲಿ ನೀಡಿದ್ದ ಭರವಸೆ ಹುಸಿಯಾಗಿದ್ದು, ನಗರಾಭಿವೃದ್ಧಿ ಹೋರಾಟ ರಸ್ತೆತಡೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆ­ಯಬೇಕಾಗಿದೆ ಎಂದು ಎಸ್‌. ದೇವೇಂದ್ರಗೌಡ ಹೇಳಿದರು.

ಡಾ ತಾಹೀರ ಅಲಿ, ಎಚ್‌.ಎನ್‌.ಬಡಿಗೇರ, ವೀರಭದ್ರಪ್ಪ ಕುರುಕುಂದಿ, ಬಸವರಾಜ ಬಾದರ್ಲಿ, ಎಸ್‌.ಗುರಿಕಾರ, ಗುಂಡಪ್ಪ ಬಳಿಗಾರ, ಪಂಪಣ್ಣ ಹಳ್ಳಿ, ಅಜಿತ್‌ ಓಸ್ತವಾಲ್‌, ಗಂಗಣ್ಣ ಡಿಶ್‌, ನಾಗರಾಜ ಬೊಮ್ಮನಾಳ, ಬಸವರಾಜ ಕೋಟೆ, ಅಬ್ದುಲ್‌ ಸಮ್ಮದ್‌ ಚೌದ್ರಿ, ಅಶೋಕ ನಂಜಲದಿನ್ನಿ, ಬಸವರಾಜ ಹಳ್ಳಿ, ಯಾಕೂಬ್‌ ಅಲಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.