ADVERTISEMENT

ತಂಬಾಕಿನಿಂದ ರೋಗ: ಜಾಗೃತಿ ಅಗತ್ಯ

ವಿಶ್ವ ತಂಬಾಕು ರಹಿತ ದಿನಾಚರಣೆ: ಜಾಗೃತಿ ಜಾಥಾದಲ್ಲಿ ಡಿಸಿ ಡಾ.ಬಗಾದಿ ಗೌತಮ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 11:31 IST
Last Updated 1 ಜೂನ್ 2018, 11:31 IST

ರಾಯಚೂರು: ತಂಬಾಕು ಸೇವನೆಯಿಂದ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸಲು ಸಮರ್ಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಗುರುವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಪೂರ್ವ ಮಾತನಾಡಿದರು.

ತಂಬಾಕಿನಲ್ಲಿ 3 ರಿಂದ 4 ಸಾವಿರ ಅಪಾಯಕಾರಕ ಅಂಶಗಳಿದ್ದು, ಸಿಗರೇಟ್‌ ಹಾಗೂ ಬೀಡಿ ಸೇವನೆಯಿಂದ ಏಳು ನಿಮಿಷ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ADVERTISEMENT

ತಂಬಾಕು ಸೇವನೆಯಿಂದ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಧೂಮಪಾನ ಮಾಡುವುದರಿಂದ ಶೇ 12 ರಷ್ಟು ಜನಕ್ಕೆ ಹೃದಯ ಸಂಬಂಧಿ ಕಾಯಿಲೆ, ಶೇ 90ರಷ್ಟು ಜನರಿಗೆ ಕ್ಯಾನ್ಸರ್ ಕಾಯಿಲೆ ಬರುತ್ತಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮರ್ಪಕವಾಗಿ ಜಾಗೃತಿ ಮೂಡಿಸುವ ಮೂಲೊಕ ಜನರು ತಂಬಾಕು ಸೇವನೆಯಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಪ್ರೆರೇಪಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಕ್ಷ್ಮೀಬಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರು, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ಕೆ.ನಾಗರಾಜ, ಡಾ.ಕೆ.ಗಣೇಶ, ಡಾ.ವಿಜಯಾ, ಡಾ.ಎಂ.ಎನ್.ನಂದಿತಾ ಇದ್ದರು.

**
ತಂಬಾಕು ಸೇವನೆಯಿಂದ ದಿನನಿತ್ಯವೂ ಜನರು ಸಾವನ್ನಪ್ಪುತ್ತಿದ್ದರಿಂದ ತಂಬಾಕು ಸೇವನೆ ಕಡಿಮೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕು
ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.