ADVERTISEMENT

ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 9:49 IST
Last Updated 3 ಸೆಪ್ಟೆಂಬರ್ 2013, 9:49 IST

ರಾಯಚೂರು: ಡೀಸೆಲ್, ಪೆಟ್ರೋಲ್ ಮತ್ತು ಅಡುಗೆ ಅನಿಲ (ಎಲ್‌ಪಿಜಿ)ಬೆಲೆ ಏರಿಕೆ ನಿರ್ಧಾರವನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಬಿಜೆಪಿ ಪಕ್ಷದ ಜಿಲ್ಲಾ ಘಟಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ  ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಿರಂತರವಾಗಿ ಡೀಸೆಲ್, ಪೆಟ್ರೋಲ್‌ಹಾಗೂ ಅಡುಗೆ ಅನಿಲದ (ಎಲ್‌ಪಿಜಿ) ಬೆಲೆ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಬದುಕಿನ ಜತೆ ಯುಪಿಎ ಸರ್ಕಾರ ಚೆಲ್ಲಾಟವಾಡುತ್ತಿದೆ, ಇಂಥ ಜನವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಕೇಂದ್ರದ ಯುಪಿಎ ಸರ್ಕಾರ ಅಸಮರ್ಪಕ ಆರ್ಥಿಕ ನೀತಿಗಳಿಂದಾಗಿ ಡಾಲರ್ ಬೆಲೆ ಎದುರು ರೂಪಾಯಿ ಮೌಲ್ಯ ಅಪಮೌಲ್ಯಕ್ಕೀಡಾಗಿದೆ. ಇದರಿಂದ ತೈಲ ಬೆಲೆ ಏರಿಕೆಯಾಗಿದೆ ಎಂಬ ಕಾರಣ ನೀಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ರೂಪಾಯಿ ಮೌಲ್ಯ ಕುಸಿತ ತಡೆಗೆ ಅಗತ್ಯ ಸುಧಾರಣಾ ಕ್ರಮ ಕೈಗೊಂಡಿಲ್ಲ. ಆರ್ಥಿಕ ತಜ್ಞ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ.ಚಿದಂಬರಂ ದೇಶದ ಆರ್ಥಿಕ ವ್ಯವಸ್ಥೆ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಕಳೆದ ತಿಂಗಳು ಯುಪಿಎ ಸರ್ಕಾರ ಪೆಟ್ರೋಲ್ ಬೆಲೆಯನ್ನು ಆರು ಬಾರಿ ಹೆಚ್ಚಿಸಿದೆ.

ಜನವರಿ 17ರಿಂದ ಡೀಸೆಲ್ ಬೆಲೆಯನ್ನು ಎಂಟು ಬಾರಿ ಏರಿಕೆ ಮಾಡಲಾಗಿದೆ. ಕಳೆದ ಎಂಟು ತಿಂಗಳಲ್ಲಿ 100ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಇದರಿಂದ ದಿನನಿತ್ಯದ ಅಗತ್ಯವಸ್ತುಗಳು ಗಣನೀಯವಾಗಿ ಬೆಲೆ ಹೆಚ್ಚಳವಾಗಿವೆ. ಕೇಂದ್ರದ ತಪ್ಪು ಆರ್ಥಿಕ ನೀತಿಗಳ ಪರಿಣಾಮವನ್ನು ಜನಸಾಮಾನ್ಯ ಮೇಲಾಗಿದೆ ಎಂದು ದೂರಿದರು.

ಕೇಂದ್ರದ ಯುಪಿಎ ಸರ್ಕಾರ ಡೀಸೆಲ್, ಪೆಟ್ರೋಲ್ ಹಾಗೂ ಅಡುಗೆ ಅನಿಲ(ಎಲ್‌ಪಿಜಿ) ಬೆಲೆ ಏರಿಕೆಯ ನಿರ್ಧಾರವನ್ನು ವಾಪಸ್ ಪಡೆಯಬೇಕು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಬಿಜೆಪಿ ಪಕ್ಷ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವನಗೌಡ ಬ್ಯಾಗವಾಟ್ ಜಿಲ್ಲಾಧಿಕಾರಿಗೆ  ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಎಪಿಎಂಸಿ ಮಾಜಿ ಅಧ್ಯಕ್ಷ ಆರ್. ತಿಮ್ಮಯ್ಯ, ಆರ್‌ಡಿಎ ಮಾಜಿ ಅಧ್ಯಕ್ಷರಾದ ರಾಜಕುಮಾರ,ಕಡಗೋಲ ಆಂಜನೇಯ, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಬಂಡೇಶ ವಲ್ಕಂದಿನ್ನಿ ಪಕ್ಷದ ಮುಖಂಡರಾದ ಗಿರೀಶ ಕನಕವೀಡು, ಬಿ.ಎಸ್ ಸುರಗಿಮಠ, ಅಶ್ವಥ, ದೇವಿಸಿಂಗ್ ಠಾಕೂರ್, ರಮಾನಂದ ಯಾದವ್,ಅಕ್ಬರ್‌ಪಾಷಾ, ಕಡಗೋಳ ರಾಮಚಂದ್ರ, ನಾರಾಯಣರಾವ್ ಪುರತಿಪ್ಲಿ, ಜಗದೀಶ, ಪರಶುರಾಮ,  ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.