ADVERTISEMENT

ತೊಗರಿ ಹಣಕ್ಕಾಗಿ ರೈತರ ಪರದಾಟ

ತೊಗರಿ ಖರೀದಿ ಕೇಂದ್ರದಿಂದ ಹಣ ನೀಡಲು ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 7:05 IST
Last Updated 11 ಜೂನ್ 2018, 7:05 IST

ಲಿಂಗಸುಗೂರು: 2017ರ ಡಿಸೆಂಬರ್‌ ತಿಂಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಆರಂಭಗೊಂಡಿದ್ದ ಖರೀದಿ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಿದ ರೈತರಿಗೆ ಈವರೆಗೂ ಹಣ ಪಾವತಿಯಾಗದ ಕಾರಣ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಕೇಂದ್ರ ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆ ₹ 5,450 ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹಧನ ₹ 550 ಸೇರಿ ಒಟ್ಟು ₹6 ಸಾವಿರದಂತೆ ಪ್ರತಿ ಕ್ವಿಂಟಲ್‌ಗೆ ತೊಗರಿ ಖರೀದಿ ಮಾಡಲಾಗಿದೆ. ನೆಫೆಡ್‌ ಸಂಸ್ಥೆ ಪರವಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ರಾಯಚೂರು ಶಾಖೆ 1,292 ರೈತರಿಂದ 16,398 ಕ್ವಿಂಟಲ್‌ ತೊಗರಿ ಖರೀದಿ ಮಾಡಿದೆ.

ಕೇವಲ ಖರೀದಿ ಮಾಡಿದ 15 ದಿನಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುವುದಾಗಿ ಆಧಾರ್‌ ಸಂಖ್ಯೆ, ಬ್ಯಾಂಕ್‌ ಪಾಸ್‌ಬುಕ್‌ ನಕಲು ಪ್ರತಿ ಇತರೆ ದಾಖಲೆ ಸಂಗ್ರಹಿಸಿದ್ದಾರೆ. ನಿಯಮಾನುಸಾರ ಬ್ಯಾಂಕ್‌ ಖಾತೆಗೆ ಹಣ ಹಾಕಲು ಅಧಿಕಾರಿಗಳು ತೋರಿರುವ ನಿರ್ಲಕ್ಷ್ಯ ಖಂಡಿಸಿ ಹಲವು ಬಾರಿ ಹೋರಾಟ ಮಾಡಿದ್ದರಿಂದ ಹಂತ ಹಂತವಾಗಿ ಹಣ ಪಾವತಿಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

‘2018ರ ಜನವರಿಯಲ್ಲಿ 20 ಕ್ವಿಂಟಲ್‌ ತೊಗರಿ ಮಾರಾಟ ಮಾಡಿರುವೆ. ಪ್ರತಿ ತಿಂಗಳು ಲಿಂಗಸುಗೂರು ಪಟ್ಟಣ್ಕಕೆ ಬಂದು, ಸಹಕಾರ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕಂಡು ಹಣ ಪಾವತಿ ಆಗದ ಬಗ್ಗೆ ದೂರು ನೀಡಲಾಗಿದೆ. ಬಂದಾಗೊಮ್ಮೆ ಕಾರಣ ಹೇಳುತ್ತಿದ್ದ ಅಧಿಕಾರಿಗಳು ಈಗ ಬ್ಯಾಂಕ್‌ ಖಾತೆ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಶಿವಶಂಕರಪ್ಪ ಕೋಠ ಆಕ್ರೋಶ ವ್ಯಕ್ತಪಡಿಸಿದರು.

ತೊಗರಿ ಖರೀದಿಗೆ ಸಂಬಂಧಿಸಿ ತಾಲ್ಲೂಕು ಆಡಳಿತ ಅಥವಾ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ತಮಗೂ ಅದಕ್ಕೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸಹಕಾರ ಸಂಸ್ಥೆ ನೋಂದಣಾಧಿಕಾರಿಯನ್ನು ಭೇಟಿ ಮಾಡಿದರೆ, ತಾವು ಎಲ್ಲ ದಾಖಲೆಗಳನ್ನು ಕೇಂದ್ರ ಕಚೇರಿಗೆ ಕಳುಹಿಸಿದ್ದೇವೆ. ಹಣ ಪಾವತಿ ಆಗದಿರುವ ಬಗ್ಗೆ ರಾಯಚೂರು ಕಚೇರಿಗೆ ಕೇಳಬೇಕು ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

ತಾಲ್ಲೂಕು ಸಹಕಾರಿ ನೋಂದಣಾಧಿಕಾರಿ ಶೇಖಹುಸೇನ ಅವರನ್ನು ಸಂಪರ್ಕಿಸಿದಾಗ, ‘1,292 ರೈತರ ಪೈಕಿ ಈಗಾಗಲೆ 1,200 ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. 92 ರೈತರ ಬ್ಯಾಂಕ್‌ ಖಾತೆ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಈಗಾಗಲೆ 78 ರೈತರ ಖಾತೆಗೆ ಹಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಉಳಿದ 14 ರೈತರ ಖಾತೆ ತಪಾಸಣೆ ನಡೆದಿದೆ’ ಎಂದು ಸ್ಪಷ್ಟಪಡಿಸಿದರು.

ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ತೊಗರಿಗೆ ಸಂಸ್ಥೆಗಳು ಹಣ ಪಾವತಿಸಲು ಮೀನಮೇಷ ಎಣಿಸುತ್ತಿದ್ದು, ವಿಳಂಬಕ್ಕೆ ಬಡ್ಡಿ ಸಮೇತ ಹಾಕಲು ಸೂಚಿಸಬೇಕು
ಅಮರಣ್ಣ ಗುಡಿಹಾಳ‌, ಮುಖಂಡ, ರೈತ ಸಂಘ‌

ಬಿ.ಎ. ನಂದಿಕೋಲಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.