ADVERTISEMENT

ದರವೇಸಿಗಳನ್ನು ಪಟ್ಟಿಗೆ ಸೇರಿಸಲು ಧರಣಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 7:40 IST
Last Updated 10 ಜುಲೈ 2012, 7:40 IST

ರಾಯಚೂರು: ದರವೇಸಿ ಅಲೆಮಾರಿ ಜನಾಂಗದ ಪಟ್ಟಿಗೆ ಸೇರಿಸಿ ಸೂಕ್ತ ಸೌಲಭ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ದರವೇಸಿ ಮಹಾಸಭಾ ಹಾಗೂ ಕರ್ನಾಟಕ ರೈತ ಸಂಘ(ಎಐಕೆಕೆಎಸ್) ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದರವೇಸಿಗಳನ್ನು ಸೂಫಿ ಸಂಗೀತ ಕಲೆಯ ಕಲಾವಿದರನ್ನಾಗಿ ಸರ್ಕಾರ ಘೋಷಣೆ ಮಾಡಬೇಕು, ದರವೇಸಿಗಳಿಗೆ ಮನೆ, ಪಡಿತರ ಚೀಟಿ, ಶಿಕ್ಷಣ ಹಾಗೂ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ದರ್ಗಾ ಇನಾಂ ಭೂಮಿಯನ್ನು ವಶಕ್ಕೆ ತೆಗೆದುಕೊಂಡು ದರವೇಸಿಗಳಿಗೆ ಭೂಮಿ ಹಂಚಿಕೆ ಮಾಡಬೇಕು, ದಾನ ದಕ್ಷಿಣೆ ಕೇಳಲು ಜನರ ಮನೆ ಬಾಗಿಲಿಗೆ ಹೋಗುವುದನ್ನು ಭಿಕ್ಷಾಟನೆ ಅಲ್ಲ ಎಂದು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ಮತ್ತು ಇಸ್ಲಾಂನ ಅನೇಕ ನಿರ್ಬಂಧ ಹಾಗೂ ದಮನಗಳ ನಡುವೆ ಪರಧರ್ಮ ಸಹಿಷ್ಣುತೆ ಹಾಗೂ ಅಹಂ ಬ್ರಹ್ಮಾಸ್ಮಿ  ಸಿದ್ಧಾಂತವನ್ನು ಸೂಫಿ ಕಲಂದರಗಳು ಪ್ರತಿಪಾದಿಸಿದರು.


ಎಲ್ಲ ಧರ್ಮಗಳಲ್ಲಿ ಎಲ್ಲ ಮಾವನರಲ್ಲಿ ದೇವನನ್ನು ಕಂಡ ಅವರ ಉದಾತ್ತ ಮನುಷ್ಯನನ್ನೇ  ಮಹದೇವ ಎಂದು ತಿಳಿಸಿದ್ದಾರೆ. ಕೋಮು ಸೌಹಾರ್ದತೆಗೆ ಬೃಹತ್ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯು ಸೇರಿದಂತೆ ಉತ್ತರ ಕರ್ನಾಟಕದಲ್ಲಿ 25 ಸಾವಿರಕ್ಕೂ ಹೆಚ್ಚು ಕುಟುಂಬಗಳು ದರವೇಸಿಗಳಾಗಿದ್ದಾರೆ. ಎಲ್ಲಿಯೂ ಅವರಿಗೆ ಖಾಸಗಿ ಆಸ್ತಿ ಇಲ್ಲದೇ ಎಲ್ಲ ಕಡೆಗೂ ತಿರುಗಾಡಿ, ಸೂಫಿ ಗುರುಗಳ ಹಾಡುಗಳನ್ನು ಹಾಡಿ ಸಕಲ ಮಾನವರನ್ನು ಹಾರೈಸುತ್ತಾರೆ. ಜನರು ಕೊಟ್ಟ ಬಿಡಿಗಾಸು ಪಡೆದು ಬದುಕು ಸಾಗಿಸುತ್ತಿದ್ದಾರೆ ಎಂದು ಸಮಸ್ಯೆಯನ್ನು ವಿವರಿಸಿದರು.

ದರವೇಸಿ ಜನಾಂಗದವರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿಲ್ಲ. ನಗರದ ಕೊಳಗೇರಿ ಹಾಗೂ ಗ್ರಾಮೀಣ ಪ್ರದೇಶಗಳ ಮಸೀದಿ, ಗುಡಿ ಗುಂಡಾರಗಳಲ್ಲಿ ವಾಸ ಮಾಡುವ ಪರಿಸ್ಥಿತಿ ಅವರದ್ದಾಗಿದೆ. ಕಷ್ಟಪಟ್ಟು ದರವೇಸಿ ಎಂದು ಪ್ರಮಾಣ ಪತ್ರ (ಸರ್ಟಿಫಿಕೇಟ್)ಪಡೆದರೂ ಯಾವ ಸೌಲಭ್ಯ ಕಲ್ಪಿಸಿಲ್ಲ ಎಂದು ಆಪಾದಿಸಿದರು.

ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ರಾಜಶೇಖರ, ದರವೇಸಿ ಮಹಾಸಭಾದ ಅಧ್ಯಕ್ಷ ಶೇಕ್ಷಾವಲಿ, ಕಾರ್ಯದರ್ಶಿ ಚಾಂದಪಾಷಾ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT