ADVERTISEMENT

ದಶಕಗಳ ಬೇಡಿಕೆಗೆ ಸಿಎಂ ಸ್ಪಂದಿಸುವರೇ?

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 7:11 IST
Last Updated 3 ಡಿಸೆಂಬರ್ 2012, 7:11 IST

ಮಸ್ಕಿ: ಮಾನ್ವಿ, ಸಿಂಧನೂರು ಹಾಗೂ ಲಿಂಗಸೂಗೂರ ತಾಲ್ಲೂಕುಗಳನ್ನು ಒಳಗೊಂಡಿರುವ ಮಸ್ಕಿಯನ್ನು ಆಡಳಿತಾತ್ಮಕ ದೃಷ್ಟಿಯಿಂದ ನೂತನ ತಾಲ್ಲೂಕು ಕೇಂದ್ರವನ್ನಾಗಿ ರಚಿಸುವಂತೆ ಒತ್ತಾಯಿಸಿ ಎರಡು ದಶಕಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ಪಂದಿಸುವರೇ?

ಮಸ್ಕಿ ಈಗಾಗಲೇ ನೂತನ ವಿಧಾನಸಭಾ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಮೂರು ತಾಲ್ಲೂಕಿನ ಸುಮಾರು 170 ಹಳ್ಳಿಗಳು ಹಾಗೂ 25ಕ್ಕೂ ಹೆಚ್ಚು ದೊಡ್ಡಿ, ತಾಂಡಾಗಳು ಬರುತ್ತಿವೆ. ಮೂರು ತಾಲ್ಲೂಕುಗಳಿಗೆ ಹರಿದು ಹಂಚಿಹೋಗಿರುವ ಮಸ್ಕಿ ಕ್ಷೇತ್ರದ ಜನತೆ ತಮ್ಮ ತಮ್ಮ ದೈನಂದಿನ ಕೆಲಸಗಳಿಗಾಗಿ ಪರದಾಡುವಂತಾಗಿದೆ. 70 ರಿಂದ 80 ಕಿ.ಮೀ ಸುತ್ತಿಬಳಸಿ ತಾಲ್ಲೂಕು ಕೇಂದ್ರಗಳಿಗೆ ಹೋಗಿ ಬರುವುದು ಇಲ್ಲಿ ಸಾಮಾನ್ಯವಾಗಿದೆ.

ಮಸ್ಕಿಯನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಮಾಡುವುದರಿಂದ ಈ ಮೂರು ತಾಲ್ಲೂಕಗಳ ಜನತೆ ಕಳೆದ 20 ವರ್ಷಗಳಿಂದ ಅನುಭವಿಸುತ್ತಿದ್ದ ತೊಂದರೆಯಿಂದ ಮುಕ್ತಿ ಪಡೆಯುತ್ತಾರೆಂದು ತಾಲ್ಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಡಾ. ಶಿವಶರಣಪ್ಪ ಇತ್ಲಿ `ಪ್ರಜಾವಾಣಿ' ಗೆ ತಿಳಿಸಿದ್ದಾರೆ.

ಈಗಾಗಲೇ ಮುಖ್ಯಮಂತ್ರಿಗಳು ಹೊಸದಾಗಿ ತಾಲ್ಲೂಕು ರಚನೆ ಸಂಬಂಧ ಹೇಳಿಕೆ ನೀಡಿದ್ದಾರೆ. ವಿಧಾನಸಭಾ ಕ್ಷೇತ್ರಗಳು ಹಂಚಿ ಹೋಗದಂತೆ ತಾಲ್ಲೂಕು ಕೇಂದ್ರಗಳನ್ನಾಗಿ ರಚಿಸುವ ಚಿಂತನೆ ಸರ್ಕಾರದ ಮುಂದೆ ಇದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಸಂಪುಟದ ಉಪ ಸಮಿತಿ ರಚಿಸಿದ್ದಾರೆಂದು ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದ್ದಾರೆ.

ಮಸ್ಕಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ರಚಿಸುವಂತೆ ಹಿಂದಿನ ಎಲ್ಲಾ ಸರ್ಕಾರಗಳು ನೇಮಕ ಮಾಡಿದ್ದ ಹುಂಡೆಕಾರ, ಗದ್ದಿಗೌಡರ್ ವಾಸುದೇವರಾವ್ ಹಾಗೂ ಎಂ.ಬಿ. ಪ್ರಕಾಶ ಸಮಿತಿಗಳು ಮಸ್ಕಿಯನ್ನು ತಾಲ್ಲೂಕು ರಚನೆಗೆ ಶಿಫಾರಸ್ಸು ಮಾಡಿರುವುದರಿಂದ ನೂತನ ತಾಲ್ಲೂಕು ರಚನೆಗೆ ಯಾವುದೇ ಅಡ್ಡಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಬೆಳಗಾವಿ ಜಿಲ್ಲೆಯ ಕಿತ್ತೂರನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಮಸ್ಕಿ ಕೂಡಾ ಒಂದು ಐತಿಹಾಸಿಕ ಕೇಂದ್ರ ಸ್ಥಳವಾಗಿದ್ದರಿಂದ ಕಿತ್ತೂರಂತೆ ಮಸ್ಕಿಯನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂಬುದು ಈ ಭಾಗದ ಸಾವಿರಾರು ಜನರ ಕೂಗು ಇದೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಸ್ಕಿಯಲ್ಲಿ ಈಗಿನ ಶಾಸಕ ಪ್ರತಾಪಗೌಡ ಪಾಟೀಲ ಅವರ ಪರ ಭಾಷಣ ಮಾಡಿದ್ದ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟರೆ ಒಂದು ತಿಂಗಳಲ್ಲಿ ಮಸ್ಕಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವ ಭರವಸೆ ನೀಡಿದ್ದರು.

ತಾಲ್ಲೂಕಿನ ಕನಸು ಕಂಡಿದ್ದ ಈ ಭಾಗದ ಜನತೆ ಅತಿ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರಿಗೆ ಮತ ನೀಡಿ ಗೆಲುವಿಗೆ ಕಾರಣರಾಗಿದ್ದರು. ಇದೀಗ ಸರ್ಕಾರದ ಅವಧಿ ಇನ್ನೂ 5 ತಿಂಗಳು ಇದೆ. ಬಿಜೆಪಿ ತಾನು ನೀಡಿದ ಭರವಸೆಯನ್ನು ಈಡೇರಿಸಬೇಕೆಂದು ಇಲ್ಲಿಯ ಜನತೆ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.