ರಾಯಚೂರು: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದೆ. ಹವಾಮಾನ ಇಲಾಖೆ ಅಂಕಿ ಅಂಕಿಗಳ ಪ್ರಕಾರ ರಾಯಚೂರು ನಗರ 36, 37, ಡಿಗ್ರಿ ಸೆಲ್ಸಿಯಸ್ ಆಸುಪಾಸು. ಆದರೆ, ಜನತೆ ಅನುಭವಿಸುತ್ತಿರುವ ತಾಪಮಾನ ತೀವ್ರತೆ 40 ಡಿಗ್ರಿ ಸೆಲ್ಸಿಯಸ್.
ಕೃಷಿ ವಿವಿ ಆವರಣದಲ್ಲಿರುವ ತಾಪಮಾನ ವಿಭಾಗದ ತಾಪಮಾನ ದಾಖಲು ವ್ಯವಸ್ಥೆ ಇದೆ. ಆದರೆ ರಾಯಚೂರು ನಗರ ಸುಮಾರು ಒಂದು ಕಿ.ಮೀ ದೂರ ಇದೆ. ಹೀಗಾಗಿ ಅಲ್ಲಿನ ತಾಪಮಾನಕ್ಕೂ ಹಾಗೂ ನಗರದಲ್ಲಿ ದಾಖಲಾಗುವ ತಾಪಮಾನಕ್ಕೂ ವ್ಯತ್ಯಾಸವಿದೆ. ನಗರದಲ್ಲಿ ಬೃಹತ್ ಗುಬ್ಬೇರು ಬೆಟ್ಟವಿದೆ.
ಹಗಲು ಬಿಸಿಲಿನ ತಾಪಕ್ಕೆ ಕಾದು ಕೆಂಡವಾಗುವ ಈ ಬೆಟ್ಟ ರಾತ್ರಿ ಹಗಲು ತಾನು ದಾಖಲು ಮಾಡಿಕೊಂಡ ಬಿಸಿಯನ್ನು ಹೊರ ಹಾಕುತ್ತದೆ. ಈ ಬಿಸಿ ತಾಪವನ್ನು ನಗರ ಜನತೆ ಪ್ರತಿ ವರ್ಷ ಬಿಸಿಲು ಕಾಲದ ದಿನಗಳಲ್ಲಿ ಅನಿವಾರ್ಯವಾಗಿ ಅನುಭವಿಸಲೇಬೇಕಾದ ಸ್ಥಿತಿ ಇದೆ.
ಮುಂಜಾನೆ 7 ಗಂಟೆಯಿಂದಲೇ ಬಿಸಿಲಿನ ತಾಪ ಶುರು. ಇನ್ನುಳಿದ ದಿನಗಳಲ್ಲಿ ವಾಹನ, ಜನ ಸಂಚಾರದಿಂದ ತುಂಬಿ ತುಳುಕುವ ರಸ್ತೆಗಳು ಈಗ ಬಿಸಿಲು ಕಾಲದಲ್ಲಿ 12 ಗಂಟೆ ಹೊತ್ತಿಗೆ ಖಾಲಿ. ಖಾಲಿ ಎನ್ನುಂತಿರುತ್ತಿವೆ.
ಪ್ರತಿ ವರ್ಷ ಬಿಸಿಲು ಕಾಲದಲ್ಲಿ ಮಣ್ಣಿನಿಂದ ತಯಾರಿಸಿದ ಮತ್ತು ನೀರು ಕುಡಿಯಲು ಬಳಸುವ ಹೂಜಿ, ಮಡಕೆ, ಹರವೆ, ಗಡಿಗೆಗಳ ಮಾರಾಟ ಕಳೆದ ಒಂದು ತಿಂಗಳ ಹಿಂದೆಯೇ ಶುರುವಾಗಿದೆ.
ತಾಲ್ಲೂಕಿನ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ತಯಾರಾದ ಗಡಿಗೆ, ಹೂಜಿಗಳನ್ನು ಕೆಲವರು ವ್ಯಾಪಾರ ಮಾಡಿದರೆ, ನಾರಾಯಣಪೇಟೆ, ಗದ್ವಾಲ್ ಹಾಗೂ ಮತ್ತಿತರ ಕಡೆಯ ಜನರೂ ಇಂಥ ಹೂಜಿಗಳನ್ನು ಮಾರಾಟಕ್ಕೆ ತಂದಿದ್ದಾರೆ.
ಬಿಸಿಲಿನ ತಾಪ ಹೆಚ್ಚಾಗಿದೆ. ನಮ್ಗೆ ವ್ಯಾಪಾರ ಮಾತ್ರ ಕಡಿಮೆ ಆಗುತ್ತಿದೆ. ಯಾಕೋ ಗೊತ್ತಿಲ್ಲ. ಒಂದು ಹೂಜಿ, ಗಡಿಗೆಗೆ 40,50 70,80 ರೂಪಾಯಿಗೊಂದು ಮಾರಾಟ ಮಾಡುತ್ತಿದ್ದೇವೆ. ಪ್ರತಿ ವರ್ಷ ಇಲ್ಲಿಗೆ ಬಂದು ಎರಡು ತಿಂಗಳ ವ್ಯಾಪಾರ ಮಾಡುತ್ತೇವೆ. ಈ ವರ್ಷ ಕಡಿಮೆ ವ್ಯಾಪಾರ ಆಗುತ್ತಿದೆ.
ಜನ್ರು ಹೆಚ್ಚು ಫ್ರಿಜ್.. ಗಿಜ್.. ತೋಗೋಳ್ತಿದ್ದಾರೆ. ಅದ್ಕೆ ವ್ಯಾಪಾರ ಕಡಿಮೆ ಆಗಿರಬಹ್ದು. ನಾವು ಬರೀ ಬಿಸಿಲಲ್ಲಿ ಕಾದು ಕೂಡಬೇಕಾಗಿದೆ ಎಂದು ನಾರಾಯಣಪೇಟದಿಂದ ಗಡಿಗೆ, ಹೂಜಿ ಮಾರಾಟ ಮಾಡಲು ಬಂದ ರಂಗಮ್ಮ ಪ್ರಜಾವಾಣಿ ಎದುರು ಸಮಸ್ಯೆ ವಿವರಿಸಿದಳು.
ರಾಯಚೂರು ಸುತ್ತಮುತ್ತಲಿನ ತುಂಟಾಪುರ ಮತ್ತಿತರ ಗ್ರಾಮಗಳ ಕುಂಬಾರರು ಮಡಕೆ, ಗಡಿಗೆ ತರುತ್ತಾರೆ. ಅವುಗಳನ್ನು ಖರೀದಿಸಿ ಇಲ್ಲಿ ವ್ಯಾಪಾರ ಮಾಡುತ್ತೇವೆ. ಒಂದು ದೊಡ್ಡ ಗಡುಗೆಗೆ 80 ರೂಪಾಯಿ ಮಾರಾಟ ಆಗುತ್ತದೆ. ಈ ವರ್ಷ ವ್ಯಾಪಾರ ಚೆನ್ನಾಗಿದೆ ಎಂದು ನಗರದ ಚಂದ್ರಮೌಳೇಶ್ವರ ದೇವಸ್ಥಾನದ ಹತ್ತಿರದ ಮಡಕೆ ವ್ಯಾಪಾರಿ ಭೀಮರಾಯ ಹೇಳಿದ್ರು.
ಹೆಚ್ಚಾದ ಹಣ್ಣು ಎಳೆ ನೀರಿನ ದರ: ಹೋದ ವರ್ಷ 13-14 ರೂಪಾಯಿಗೊಂದು ಇದ್ದ ಎಳೆ ನೀರು ಈ ವರ್ಷ 18ರಿಂದ 20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಪ್ರಶ್ನಿಸಿದರೆ ಮಾಲ್ ಶಾರ್ಟೆಜ್. ಹೋಲ್‌ಸೇಲ್‌ನಲ್ಲಿ ತಂದು ಇಲ್ಲಿ ಮಾರಲೂ ಎಳೆ ನೀರು ಸಿಗುತ್ತಿಲ್ಲ. ದಿನಕ್ಕೆ ಒಂದೆರಡು ಲೋಡ್ ಬಂದ್ರೂ ಕೆಲವೇ ತಾಸಿನಲ್ಲಿ ಖಾಲಿ ಆಗುತ್ತವೆ ಎಂದು ಎಳೆ ನೀರು ವ್ಯಾಪಾರಸ್ಥರು ತಮ್ಮ ಸಮಸ್ಯೆ ಹೇಳ್ಕೋತ್ತಾರೆ.
ಒಂದು ಕಲ್ಲಂಗಡಿ ಹಣ್ಣಿನ ಬೆಲೆ 40-50 ರೂಪಾಯಿಗೇರಿದೆ! ಕರಬೂಜಾ, ಸೌತೆ ಹಣ್ಣಿಗೂ ಡಿಮ್ಯಾಂಡ್! ಫ್ರಿಜ್- ಕೂಲರ್‌ಗಳ ಮಾರಾಟ ಜೋರಾಗಿದೆ. ಸಮ್ಮರ್ ಆಫರ್ ಸ್ಕೀಮ್ ಘೋಷಣೆಗಳೂ ಗ್ರಾಹಕರನ್ನು ಸೆಳೆಯುತ್ತಿವೆ.
ಬಿಸಿಲ ತಾಪಕ್ಕೆ ತತ್ತರಿಸುತ್ತಿರುವ ಜನತೆ ಸ್ವಲ್ಪ ತಂಪಾಗಲೂ ತಮ್ಮ ಜೇಬಿಗೂ ಸ್ವಲ್ಪ ಬಿಸಿ ತಟ್ಟಿಸಿಕೊಳ್ಳಲೇಬೇಕಾದ ಸ್ಥಿತಿ ಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.