ಕೆಂಭಾವಿ: ಧರ್ಮದ ಹೆಸರಿಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ಹೇಳಿದರು.
ಪಟ್ಟಣದ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡುತ್ತಾ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತವನ್ನು ಜನ ನೋಡಿದ್ದಾರೆ, ಬಿಜೆಪಿ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಹಿಂದೆ ರಾಜ್ಯವನ್ನು ಲೂಟಿ ಮಾಡಿದ್ದು, ಈಗ ಮೋದಿ ನೇತೃತ್ವದಲ್ಲಿ ದೇಶವನ್ನು ಕೊಳ್ಳೆ ಹೊಡೆಯುವ ಸಂಚು ನಡೆಸಿದೆ ಎಂದರು.
ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಕ್ಷಾಂತರಿಯಾಗಿದ್ದು, ಸಚಿವರಾಗಿದ್ದಾಗ ರಾಯಚೂರು ಜಿಲ್ಲೆಗೆ ಬಂದ ಸಾವಿರಾರು ಕೋಟಿ ಅನುದಾನವನ್ನು ಕೊಳ್ಳೆ ಹೊಡೆದಿದ್ದಾರೆ, ಲೋಕಾಯುಕ್ತ ತನಿಖೆಯೂ ನಡೆಯುತ್ತಿದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ನಡೆಸಿದ್ದು, ಇದಕ್ಕೆ ಜನತೆ ತಕ್ಕ ಪಾಠ ಕಲಿಸಲಿಸಿದ್ದಾರೆ ಎಂದರು.
ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಕೇಂದ್ರ ಸರ್ಕಾರ ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನ 371(ಜೆ) ಕಲಂ ತಿದ್ದುಪಡಿ ಮಾಡಿದ್ದು, ಆರು ಜಿಲ್ಲೆಗಳಿಗೆ ಶೈಕ್ಷಣಿಕ, ಆರ್ಥಿಕ ಉದ್ಯೋಗ ಅವಕಾಶ ಸೇರಿದಂತೆ ಅಭಿವೃದ್ಧಿಗೆ ಪೂರವಾದ ಕಾನೂನು ಜಾರಿಗೆ ತಂದಿದೆ. ಈ ಭಾಗದ ರೈತರಿಗಾಗಿ ನೀರಾವರಿ ಯೋಜನೆಗೆ ₨3,750 ಕೋಟಿ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಕ್ಷೇತ್ರದ ಶಾಸಕ ಗುರು ಪಾಟೀಲರು ಒಂದು ವರ್ಷದ ಅವಧಿಯಲ್ಲಿ ಒಂದೂ ಅಭಿವೃದ್ಧಿ ಕಾರ್ಯ ಮಾಡದೇ, ಕೇವಲ ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇದು ಜನರನ್ನು ತಪ್ಪು ದಾರಿಗೆ ಎಳೆಯುವ ಹುನ್ನಾರ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗನಗೌಡ ಮಾಲಿಪಾಟೀಲ, ಚಂದ್ರಶೇಖರ ಆರಬೋಳ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿದ್ದನಗೌಡ ಪೊಲೀಸ್‌ಪಾಟೀಲ, ಹನುಮೇಗೌಡ ಮರಕಲ್, ನಾಗನಗೌಡ ಸುಬೇದಾರ, ವೆಂಕಟಪ್ಪ ನಾಯಕ ವನದುರ್ಗ, ಕೆ.ಶಾಂತಪ್ಪ, ಕುರುಬ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಶಿವಮಹಾಂತ ಚಂದಾಪುರ, ಬಸವರಾಜಪ್ಪ ತಂಗಡಗಿ, ಅಯ್ಯನಗೌಡ ವಂದಗನೂರ, ಮಲ್ಲಣ್ಣ ಹೆಗ್ಗೇರಿ, ಮಲ್ಲಣ್ಣ ಮೇಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಖಾಜಾ ಪಟೇಲ್ ಕಾಚೂರ ಇದ್ದರು.
ಮಲ್ಲಿಕಾರ್ಜುನ ಸ್ವಾಮಿ ನಿರೂಪಿಸಿದರು, ಎಪಿಎಂಸಿ ಸದಸ್ಯ ವಾಮನರಾವ ದೇಶಪಾಂಡೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.