ADVERTISEMENT

ನಗರದ ಸಮಗ್ರ ಅಭಿವೃದ್ಧಿಗೆ ₹104 ಕೋಟಿ

ರಾಯಚೂರು ನಗರಸಭೆಯಿಂದ 2018–19ನೇ ಸಾಲಿನ ಬಜೆಟ್‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 11:36 IST
Last Updated 1 ಮಾರ್ಚ್ 2018, 11:36 IST
ರಾಯಚೂರು ನಗರಸಭೆ ಪೌರಾಯುಕ್ತ ರಮೇಶ ನಾಯಕ ಅವರು ಬುಧವಾರ 2018–19ನೇ ಸಾಲಿನ ಬಜೆಟ್‌ ಮಂಡಿಸಿದರು
ರಾಯಚೂರು ನಗರಸಭೆ ಪೌರಾಯುಕ್ತ ರಮೇಶ ನಾಯಕ ಅವರು ಬುಧವಾರ 2018–19ನೇ ಸಾಲಿನ ಬಜೆಟ್‌ ಮಂಡಿಸಿದರು   

ರಾಯಚೂರು: 2018–19ನೇ ಸಾಲಿನಲ್ಲಿ ನಗರದ ಅಭಿವೃದ್ಧಿಗಾಗಿ ₹103.99 ಕೋಟಿ ವೆಚ್ಚ ಮಾಡುವ ಅಂದಾಜು ಮೊತ್ತದ ಬಜೆಟ್‌ನ್ನು ಪೌರಾಯುಕ್ತ ರಮೇಶ ನಾಯಕ ಮಂಡಿಸಿದರು.

ನಗರ ಗುಲ್ಶನ್‌ ಗಾರ್ಡನ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಬಜೆಟ್‌ ಮಹಾಸಭೆಯಲ್ಲಿ ಸಾರ್ವಜನಿಕರು ಕೂಡಾ ಪಾಲ್ಗೊಂಡಿದ್ದರು.

ಸರ್ವ ಪಕ್ಷಗಳ ಸದಸ್ಯರು ಅವಿರೋಧವಾಗಿ ಬಜೆಟ್‌ ಅನುಮೋದಿಸಿದ್ದು ವಿಶೇಷವಾಗಿತ್ತು. ಬಜೆಟ್‌ ಕುರಿತಾಗಿ ನಡೆಯಬೇಕಿದ್ದ ಚರ್ಚೆ ವಿಷಯಾಂತರವಾಯಿತು. ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರು ಹಲವಾರು ವಿಷಯ ಪ್ರಸ್ತಾಪಿಸಿದ್ದರಿಂದ ಚರ್ಚೆ ನಡೆಯುವ ಬದಲಾಗಿ ವಾಗ್ವಾದಕ್ಕೆ ಸಭೆ ಎಡೆಮಾಡಿತು.

ADVERTISEMENT

ನಗರಸಭೆ ಅಧ್ಯಕ್ಷೆ ಹೇಮಲತಾ ಬೂದೆಪ್ಪ ಮಾತನಾಡಿ, ‘ನಗರದ ಅಭಿವೃದ್ಧಿ ಯೋಜನೆ ರೂಪಿಸಿ ಜಾರಿಗೊಳಿಸಲು ಪಕ್ಷಾತೀತವಾಗಿ ಇಲ್ಲಿಯವರೆಗೂ ಸದಸ್ಯರೆಲ್ಲ ಬೆಂಬಲಿಸಿದ್ದಾರೆ. ನನ್ನ ಅವಧಿಯಲ್ಲಿ ಮಂಡಿಸುತ್ತಿರುವ ಕೊನೆಯ ಬಜೆಟ್‌ ಇದಾಗಿದೆ. ನಗರದಾದ್ಯಂತ ರಸ್ತೆ, ಚರಂಡಿಗಳು ಹಾಗೂ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ಸಾಧ್ಯವಾಯಿತು. ಈ ವರ್ಷವೂ ಉಳಿತಾಯ ಬಜೆಟ್‌ ಮಂಡನೆ ಮಾಡಲಾಗುತ್ತಿದ್ದು, ನಗರದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಕೋರಿದರು.

ಖರ್ಚಿನ ವಿವರ: 2018 ರ ಏಪ್ರಿಲ್‌ನಿಂದ ವಿವಿಧ ವಿಭಾಗಗಳಿಗೆ ಮಾಡುವ ವೆಚ್ಚಗಳನ್ನು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಆಡಳಿತ ವೆಚ್ಚಕ್ಕಾಗಿ ₹11.32 ಕೋಟಿ ಮೀಸಲಿಡಲಾಗಿದೆ. ಆಡಳಿತದಲ್ಲಿ ವೇತನ ಭತ್ಯೆ ಹಾಗೂ ಇತರೆ ಸವಲತ್ತಿಗಾಗಿ ₹2.64 ಕೋಟಿ, ವೇತನಕ್ಕಾಗಿ ₹2.76 ಕೋಟಿ, ಸೇವೆ ವಿಸ್ತರಿಸಿದವರಿಗೆ ವೇತನ ನೀಡಲು ₹1.5 ಕೋಟಿ, ಪುಸ್ತಕಗಳು, ನಿಯತಕಾಲಿಕೆಗಳು ಹಾಗೂ ಇತರೆ ಸಾಮಗ್ರಿಗಳ ಖರೀದಿಗೆ ₹15 ಲಕ್ಷ, ಪ್ರಯಾಣ ಮತ್ತು ದಿನ ವೆಚ್ಚಕ್ಕಾಗಿ ₹10 ಲಕ್ಷ, ಹೊರಗುತ್ತಿಗೆ ವೆಚ್ಚ ₹42 ಲಕ್ಷ, ವಿವಿಧ ಕಾರ್ಯಕ್ರಮಗಳಿಗಾಗಿ ₹35 ಲಕ್ಷ ವೆಚ್ಚವಾಗುವ ಅಂದಾಜು ಮಾಡಲಾಗಿದೆ.

ಸಾಮಾನ್ಯ ಆಡಳಿತ ವೆಚ್ಚಕ್ಕಾಗಿ ₹90 ಲಕ್ಷ ತೋರಿಸಲಾಗಿದೆ. ಅದರಲ್ಲಿ ಸಾಮಾನ್ಯ ಸಭೆ ಹಾಗೂ ಸಂಬಂಧಿತ ಸಭೆಗಾಗಿ ₹25 ಲಕ್ಷ, ಜಾಹೀರಾತು ಹಾಗೂ ಪ್ರಚಾರಕ್ಕಾಗಿ ₹25 ಲಕ್ಷ, ಮುದ್ರಣ ಹಾಗೂ ಛಾಯಾಚಿತ್ರಗಳಿಗಾಗಿ ₹5 ಲಕ್ಷ ಇಡಲಾಗಿದೆ.

ಸಾರ್ವಜನಿಕ ರಸ್ತೆ, ಒಳದಾರಿಗಳು, ಪಾದಚಾರಿ ರಸ್ತೆಗಳು ಹಾಗೂ ರಸ್ತೆ ತೋಡುವ ಕೆಲಸದ ವಿಭಾಗದಲ್ಲಿ ₹1.81 ಕೋಟಿ ವೆಚ್ಚವಾಗುವ ಅಂದಾಜನ್ನು ನಗರಸಭೆ ಮಾಡಿದೆ. ಅದರಲ್ಲಿ ವೇತನ ಭತ್ಯೆ, ಸಂಬಳ, ಶಕ್ತಿ ಹಾಗೂ ಇಂಧನ ಹಾಗೂ ದುರಸ್ತಿ, ನಿರ್ವಹಣೆ, ಪಾದಚಾರಿ ರಸ್ತೆ, ರಸ್ತೆಬದಿ ಚರಂಡಿ ಕೆಲಸವನ್ನು ತೋರಿಸಲಾಗಿದೆ.

ಬೀದಿ ದೀಪಗಳಿಗಾಗಿ ₹13.3 ಕೋಟಿ ವೆಚ್ಚವನ್ನು ಅಂದಾಜು ಮಾಡಿದ್ದು, ಅದರಲ್ಲಿ ಸಾಮಾನ್ಯ ವೆಚ್ಚ ₹5 ಲಕ್ಷ, ವಿದ್ಯುತ್‌ ಬಿಲ್‌ ಹಾಗೂ ಡಬ್ಲುಎಸ್‌ಗಾಗಿ ₹12 ಕೋಟಿ, ಸಗಟು ಖರೀದಿಗಾಗಿ ₹50 ಲಕ್ಷ, ದುರಸ್ತಿ ಹಾಗೂ ನಿರ್ವಹಣೆಗಾಗಿ ₹75 ಲಕ್ಷ ತೆಗೆದಿಡಲಾಗುತ್ತಿದೆ.

ಬೃಹತ್‌ ಚರಂಡಿ, ಸೇತುವೆ ಹಾಗೂ ಇನ್ನಿತರೆ ವೆಚ್ಚ ₹35 ಲಕ್ಷ, ಸಾರ್ವಜನಿಕ ಆರೋಗ್ಯಕ್ಕಾಗಿ ₹1.03 ಕೋಟಿ, ಆಸ್ಪತ್ರೆ ಸೇವಾ ವೆಚ್ಚಕ್ಕೆ ₹5 ಲಕ್ಷ, ಘನತ್ಯಾಜ್ಯ ನಿರ್ವಹಣೆಗಾಗಿ ₹10.51 ಕೋಟಿ ವೆಚ್ಚ ಮಾಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ತ್ಯಾಜ್ಯ ಕಾರ್ಯನಿರ್ವಹಣೆ ವೆಚ್ಚ ಹಾಗೂ ಹೊರಗುತ್ತಿಗೆಗಾಗಿ ಅತಿ ಹೆಚ್ಚು ₹6.6 ಕೋಟಿ ವೆಚ್ಚವು ಒಳಗೊಂಡಿದೆ. ನೀರು ಸರಬುರಾಜಿಗಾಗಿ ₹4.89 ಕೋಟಿ ವೆಚ್ಚ. ಒಳಚರಂಡಿಗಾಗಿ ₹54.75 ಲಕ್ಷ, ಬಡತನ ನಿರ್ಮೂಲನೆಗಾಗಿ ₹5.03 ಕೋಟಿ ವೆಚ್ಚ ಮಾಡುವ ಅಂದಾಜು ಇದೆ. ಕೊಳಚೆ ಪ್ರದೇಶ ಅಭಿವೃದ್ಧಿಗೆ ₹50 ಲಕ್ಷ, ಶಿಕ್ಷಣಕ್ಕಾಗಿ ₹8.25 ಲಕ್ಷ ಆಸ್ತಿ ತೆರಿಗೆ ಸಂಗ್ರಹ ಹಾಗೂ ವೆಚ್ಚದಲ್ಲಿ ₹67.5 ಲಕ್ಷ ವೆಚ್ಚ ಮಾಡಲಾಗುತ್ತಿದೆ.

ಆದಾಯ ಸಂಗ್ರಹದ ಅಂದಾಜುಗಳು: ಎಸ್‌ಎಫ್‌ಸಿ ಅನುದಾನ ₹2.64 ಕೋಟಿ, ವಿದ್ಯುತ್‌ ಅನುದಾನ ₹12 ಕೋಟಿ, ವಾಣಿಜ್ಯ ಸಂಕೀರ್ಣಗಳಿಂದ ಬರುವ ಬಾಡಿಗೆ ₹20 ಲಕ್ಷ, ಕಟ್ಟಡ ನಿಯಂತ್ರಣಕ್ಕೆ ಸಂಬಂಧಿಸಿದ ಶುಲ್ಕಗಳು ₹1.85 ಕೋಟಿ, ಅಭಿವೃದ್ಧಿ ಶುಲ್ಕ ₹85 ಲಕ್ಷ, ಪರವಾನಿಗೆ ಶುಲ್ಕ ₹25 ಲಕ್ಷ ಸೇರಿದಂತೆ ಒಟ್ಟು ನಿರೀಕ್ಷಿತ ಆದಾಯವು ₹99.5 ಕೋಟಿ ಎಂದು ಆಂದಾಜು ಮಾಡಲಾಗಿದೆ.
***
ಇಂದಿರಾ ಕ್ಯಾಂಟಿನ್‌ ಏಕೆ ಹಣ?

ಇಂದಿರಾ ಕ್ಯಾಂಟಿನ್‌ಗಾಗಿ ನಗರಸಭೆಯಿಂದ ಏಕೆ ಅನುದಾನ ಕೊಟ್ಟಿದ್ದೀರಿ? ಎಂದು ನಗರಸಭೆ ಸದಸ್ಯ ಹರೀಶ್‌ ಅವರು ಸಭೆಯಲ್ಲಿ ಪ್ರಶ್ನಿಸಿದರು. ಅಲ್ಲದೆ ‘ಸಿದ್ದರಾಮಯ್ಯ’ ಅದನ್ನು ಉದ್ಘಾಟನೆ ಮಾಡಿ ಹೋದರು ಎಂದು ಏಕವಚನದಲ್ಲಿ ಸಂಬೋಧಿಸಿದರು.

ಇದಕ್ಕೆ ಕೂಡಲೇ ಪ್ರತಿರೋಧ ತೋರಿಸಿದ ಉಪಾಧ್ಯಕ್ಷ ಜಯಣ್ಣ ‘ಹರೀಶ್‌ ಅವರು ಅನುಭವ ಮೀರಿ ಮಾತನಾಡಬಾರದು. ಅವರು ಸಿದ್ದರಾಮಯ್ಯ ಅಲ್ಲ. ರಾಜ್ಯದ ಮುಖ್ಯಮಂತ್ರಿ ಇದ್ದು, ಗೌರವ ಕೊಟ್ಟು ಮಾತನಾಡಿ. ಸರ್ಕಾರದ ನಿರ್ದೇಶನದಂತೆ ಇಂದಿರಾ ಕ್ಯಾಂಟಿನ್‌ಗಳ ನಿರ್ವಹಣೆಗಾಗಿ ₹45 ಲಕ್ಷ ಅನುದಾನ ಕೊಡಲಾಗಿದೆ. ಸರ್ಕಾರದ ಸೂಚನೆ ಪಾಲಿಸಬೇಕಾಗಿರುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗುತ್ತದೆ. ಈ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು ಮಾತನಾಡಿ’ ಎಂದರು.

ಆನಂತರ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು’ ಎಂದು ಹರೀಶ್‌ ಅವರು ತಪ್ಪು ತಿದ್ದಿಕೊಂಡು ಮಾತನಾಡಿದರು.
***
ನೀರಿಗಾಗಿ ವಿಶೇಷ ಸಭೆ

‘ನಗರದಲ್ಲಿ ನೀರಿನ ಸಮಸ್ಯೆ ಪರಿಹಾರ ಮಾಡುವಂತೆ ಒತ್ತಾಯಿಸಿ, ಎಗರಾಡಿ ರಕ್ತದೊತ್ತಡ ಹೆಚ್ಚು ಮಾಡಿಕೊಂಡಿದ್ದೇನೆ. ಆದರೆ ಸಮಸ್ಯೆ ಮಾತ್ರ ಪರಿಹಾರ ಆಗುತ್ತಿಲ್ಲ. ಕುಡಿಯುವ ನೀರಿಗಾಗಿ ವಿಶೇಷ ಸಭೆ ಏರ್ಪಡಿಸಬೇಕು’ ಎಂದು ಹಿರಿಯ ಸದಸ್ಯ ಎ.ಮಾರಪ್ಪ ಅವರು ಸಭೆಗೆ ಒತ್ತಾಯಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.