ADVERTISEMENT

ನಗರ ಸಾರಿಗೆ ಬಸ್‌ಗೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:23 IST
Last Updated 12 ಡಿಸೆಂಬರ್ 2013, 8:23 IST

ರಾಯಚೂರು: ರಾಯಚೂರಿನಲ್ಲಿ ನಗರ ಸಾರಿಗೆ ನೂತನ ಬಸ್‌ ಸಂಚಾರ ಆರಂಭಗೊಂಡು ಡಿಸೆಂಬರ್ 8ಕ್ಕೆ ಎರಡು ತಿಂಗಳಾಗಿದ್ದು, ಈ ನೂತನ ಬಸ್ ಸಂಚಾರಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಅಕ್ಟೋಬರ್ 8ರಂದು ನಗರದ ನೂತನ ಬಸ್‌ ನಿಲ್ದಾಣ ಉದ್ಘಾಟನೆ ನೆರವೇರಿಸಿದ ಸಾರಿಗೆ ಸಚಿವ ರಾಮ­ಲಿಂಗಾರೆಡ್ಡಿ ಅವರು ಇದೇ ಸಂದರ್ಭ­ದಲ್ಲಿ ರಾಯಚೂರು ನಗರ ಸಾರಿಗೆಗೆ 20 ಹೊಸ ಬಸ್‌ ಸಂಚಾರಕ್ಕೂ ಹಸಿರು ನಿಶಾನೆ ತೋರಿಸಿದ್ದರು.

ಈಗ ಈ ಬಸ್‌ ಎರಡು ತಿಂಗಳಿಂದ ನಗರದ ವಿವಿಧ ಹೊಸ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಹದಗೆಟ್ಟ, ಇಕ್ಕಟ್ಟಾದ ರಸ್ತೆಗಳಲ್ಲಿಯೇ ಸಂಚರಿಸಿ ಸಾರ್ವಜನಿ­ಕರಿಗೆ ಉತ್ತಮ ಸೇವೆ ಕಲ್ಪಿಸುತ್ತಿವೆ.

‘ಹೊಸದಾಗಿ ಆರಂಭಗೊಂಡ 20 ಬಸ್‌ಗಳ ಸಂಚಾರದಿಂದ ನಿತ್ಯ ಕನಿಷ್ಠ ₨ 80 ಸಾವಿರ ಸಂಗ್ರಹ ಆಗುತ್ತದೆ. ಹಳೆಯ 10 ಬಸ್‌ ಸಂಚಾರದಿಂದ ₨ 20 ರಿಂದ 25 ಸಾವಿರ ಸಂಗ್ರಹ ಆಗುತ್ತಿದೆ. ವಾಸವಿನಗರ, ನವೋದಯ ಕಾಲೇಜು, ಯರಮರಸ್ ಈ ಹೊಸ ಮಾರ್ಗದಲ್ಲಿ ಹೊಸ ಬಸ್‌ ಸಂಚರಿ­ಸುತ್ತಿವೆ.

ಪ್ರಯಾಣಿಕರ ಉತ್ತಮ ಸ್ಪಂದನೆ ಇದೆ. ಹಳೆಯ ಬಸ್‌ ಸಂಚರಿ­ಸುವ ಆಶ್ರಯ ಕಾಲೊನಿ, ಕೃಷ್ಣದೇವ­ರಾಯನಗರ, ದೇವಿನಗರ ಇಂಥ ಕಡೆ ಜನ ಸಂಚಾರ ಕಡಿಮೆ ಹೀಗಾಗಿ ಸಂಗ್ರಹ ಕಡಿಮೆ ಇದೆ’ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ಅಧಿಕಾರಿ ವೆಂಕಟೇಶ್ವರರೆಡ್ಡಿ ‘ಪ್ರಜಾ­ವಾಣಿ’ಗೆ ತಿಳಿಸಿದರು.

‘ರಾತ್ರಿ ಮತ್ತು ರೈಲು ಬರುವ ವೇಳೆಯಲ್ಲಿ ನಗರ ಸಾರಿಗೆ ಬಸ್ ಸಂಚಾರಕ್ಕೆ ಸಾರ್ವಜನಿಕರಿಂದ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಿ ಶೀಘ್ರ ಬಸ್ ಸೌಕರ್ಯ ಕಲ್ಪಿಸಲು ಪ್ರಯತ್ನಿಸಲಾಗು­ವುದು. ಚಾಲಕರು ಮತ್ತು ನಿರ್ವಾಹಕರ ಕೊರತೆ ಇಲ್ಲಿಯವರೆಗೆ ಇತ್ತು.

ಈಗ ಸರ್ಕಾರವು ಚಾಲಕ ಮತ್ತು ನಿರ್ವಾಹಕ ಸೇರಿ 150 ಜನರನ್ನು ರಾಯಚೂರು ವಿಭಾಗಕ್ಕೆ ಕಳುಹಿಸಿದೆ. ಎಲ್ಲರೂ ಈಗ ತರಬೇತಿ ಪಡೆಯುತ್ತಿದ್ದು, ಸಿಬ್ಬಂದಿ ಕೊರತೆಯೂ ನೀಗಲಿದೆ. ಇದರಿಂದ ಪರಿಣಾಮಕಾರಿ ಸಾರಿಗೆ ಸೌಕರ್ಯ ಕಲ್ಪಿಸಲು ಸಹಾಯವಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.