ADVERTISEMENT

ನಶೆಯಿಂದ ಸಮಾಜ ನಾಶ: ಮೇಧಾ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 8:53 IST
Last Updated 30 ಅಕ್ಟೋಬರ್ 2017, 8:53 IST
ರಾಯಚೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶ ಮತ್ತು ರ‍್ಯಾಲಿಯನ್ನು ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಮದ್ಯದ ಬಾಟಲಿ ಒಡೆದು ವಿನೂತನವಾಗಿ ಉದ್ಘಾಟಿಸಿದರು
ರಾಯಚೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶ ಮತ್ತು ರ‍್ಯಾಲಿಯನ್ನು ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಮದ್ಯದ ಬಾಟಲಿ ಒಡೆದು ವಿನೂತನವಾಗಿ ಉದ್ಘಾಟಿಸಿದರು   

ರಾಯಚೂರು: ‘ಮದ್ಯದ ಅಮಲಿನಿಂದ ಸಂಗ್ರಹವಾಗುವ ಹಣದಲ್ಲಿ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯವೇ ಇಲ್ಲ. ನಶೆಯಿಂದ ಸಮಾಜವು ನಾಶವಾಗುತ್ತದೆ’ ಎಂದು ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಹೇಳಿದರು.

ನಗರದ ಎಪಿಎಂಸಿ ಗಂಜ್‌ ಆವರಣದಲ್ಲಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ನೇತೃತ್ವದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಮಹಿಳಾ ಸಮಾವೇಶ ಮತ್ತು ರ‍್ಯಾಲಿ ಉದ್ಘಾಟಿಸಿ ಮಾತನಾಡಿದರು.

‘ಮದ್ಯ ನಿಷೇಧಿಸಿದರೆ ಅಭಿವೃದ್ಧಿಗೆ ಹೊಡೆತ ಬೀಳುವುದಿಲ್ಲ. ಮದ್ಯ ಮಾರಾಟದಿಂದ ಸಂಗ್ರಹವಾಗುವ ತೆರಿಗೆ ಹಣವು ಮದ್ಯ ನಿಷೇಧದ ಬಳಿಕ ಜನರ ಬಳಿಯಲ್ಲಿ ಉಳಿಯುತ್ತದೆ. ಈ ಉಳಿದ ಹಣವನ್ನು ಇತರೆ ಅಭಿವೃದ್ಧಿ ಕೆಲಸಕ್ಕಾಗಿ ಜನರು ಬಳಸುತ್ತಾರೆ. ಪರೋಕ್ಷವಾಗಿ ಹಣವು ಆರ್ಥಿಕ ವ್ಯವಸ್ಥೆಯ ಚಕ್ರದಲ್ಲೇ ಇರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಕರ್ನಾಟಕದಲ್ಲಿ ಮಹಿಳೆಯರು ಮದ್ಯ ನಿಷೇಧದ ಹೋರಾಟವನ್ನು ಪ್ರಬಲ ಮಾಡಿದ್ದಾರೆ. ಇದರ ಪರಿಣಾಮ ಕಲಬುರ್ಗಿ ಜಿಲ್ಲೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕಡಿಮೆ ಮದ್ಯ ಮಾರಾಟ ಆಗಿದೆ. ಕಲಬುರ್ಗಿಯ ಮಹಿಳೆಯರು ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದಾರೆ. ಮದ್ಯ ಮಾರಾಟದ ಪ್ರತಿಯೊಂದು ಅಂಗಡಿ ಎದುರು ಹೋರಾಟಗಳು ನಡೆಯಬೇಕಿದೆ’ ಎಂದು ತಿಳಿಸಿದರು.

ಸಿರಿಗೆರೆ ತರಳುಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ತರಳಬಾಳು ಮಠವು 30 ವರ್ಷಗಳಿಂದ ಮದ್ಯ ವಿರೋಧಿ ಆಂದೋಲನ ಮಾಡುತ್ತಿದೆ. ಈಗ ಮದ್ಯದ ಪಿಡುಗು ಮಿತಿಮಿರಿದೆ. ಮದ್ಯವು ಸಮಾಜದ ದಾರಿ ತಪ್ಪಿಸಿದೆ.

ಹೆದ್ದಾರಿಯಿಂದ 5೦೦ ಮೀಟರ್ ದೂರ ಮದ್ಯದಂಗಡಿ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ ರಾಜ್ಯ ಸರ್ಕಾರವು ರಸ್ತೆಯನ್ನು ಡಿನೋಟಿಫೈ ಮಾಡಿರುವುದು ದುರಾದೃಷ್ಟಕರ’ ಎಂದರು. ಮದ್ಯ ನಿಷೇಧ ಆಂದೋಲನದ ವಿದ್ಯಾ ಪಾಟೀಲ, ಹಫೀಜುಲ್ಲಾ, ಜಾನ್ ವೆಸ್ಲಿ, ಆಳಂದ ಶಾಸಕ ಬಿ.ಆರ್‌.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.