ADVERTISEMENT

ನಾಳೆ ಗ್ರಿಡ್ ನಿರ್ಮಾಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 5:45 IST
Last Updated 11 ಅಕ್ಟೋಬರ್ 2012, 5:45 IST

ರಾಯಚೂರು: ಕೇಂದ್ರ ಸರ್ಕಾರದ ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಸಂಸ್ಥೆಯು ದಕ್ಷಿಣ ಭಾರದಲ್ಲಿಯೇ ಪ್ರಪ್ರಥಮ ಎನ್ನಲಾದ ರಾಯಚೂರು- ಸೊಲ್ಲಾಪುರ 765 ಕೆ.ವಿ ಸಾಮರ್ಥ್ಯದ ವಿದ್ಯುತ್ ಸರಬರಾಜು ಗ್ರಿಡ್ ನಿರ್ಮಾಣ ಕಾಮಗಾರಿಗೆ ಇದೇ 12ರಂದು ಶಂಕು ಸ್ಥಾಪನೆನೆರವೇರಿಸಲಿದೆ.

ರಾಯಚೂರು- ಲಿಂಗಸುಗೂರು ರಸ್ತೆ ಮಾರ್ಗದ ರಾಯಚೂರು ತಾಲ್ಲೂಕಿನ ಆಸ್ಕಿಹಾಳ ಗ್ರಾಮದ ಹತ್ತಿರ ಈ ನೂತನ ಗ್ರಿಡ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಯುತ್ತಿದೆ.ತಮಿಳುನಾಡು, ಪಾಂಡಿಚೇರಿ, ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರದ ಬೇರೆ ರಾಜ್ಯಗಳಿಗೆ ವಿದ್ಯುತ್ ಸರಬರಾಜು ಮಾಡುವ ಪ್ರಮುಖ ಕೇಂದ್ರವಾಗಿ ಈ ಗ್ರಿಡ್ ಹೊರ ಹೊಮ್ಮಲಿದೆ.

ಇದೇ 12ರಂದು  ಮಧ್ಯಾಹ್ನ 3 ಗಂಟೆಗೆ ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ. ಕೇಂದ್ರ ಇಂಧನ ಖಾತೆ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂ. ವೀರಪ್ಪ ಮೊಯಿಲಿ, ಕೇಂದ್ರ ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಜಗದೀಶ ಶೆಟ್ಟರ್, ರಾಜ್ಯ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್ ಸೆಲ್ವಕುಮಾರ ಮುಖ್ಯ ಅತಿಥಿಗಳಾಗಿರುವರು.

ಈ ಗ್ರಿಡ್ ಸ್ಥಾಪನೆಗೆ ಆಸ್ಕಿಹಾಳ ಸಮೀಪ ಭೂಮಿ ದೊರಕಿಸಲು ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಸಂಸ್ಥೆಯು ಜಿಲ್ಲಾಡಳಿತದ ಮೊರೆ ಹೋದಾಗ ಕೆಲ ರೈತ ಕುಟುಂಬ ವರ್ಗದವರು ಬೆಲೆ ಬಾಳುವ ಭೂಮಿ ತಾವು ದೊರಕಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು.

ಪ್ರತಿ ಎಕರೆಗೆ ಕನಿಷ್ಠ 30ರಿಂದ 40 ಲಕ್ಷ ದೊರಕಿಸಬೇಕು ಎಂಬುದು ಕೆಲ ರೈತರ ಬೇಡಿಕೆಯಾಗಿತ್ತು. ಈಗಲೂ ಆ ಸ್ಥಳದಲ್ಲಿ ರೈತ ಸಂಘದ ಬೋರ್ಡ್ ಇದೆ.ಈ ಎಲ್ಲ ಬೆಳವಣಿಗೆಗಳ ನಡುವೆ ಪವರ್ ಗ್ರಿಡ್ ಕಾರ್ಪೊರೇಶನ್ ಸಂಸ್ಥೆಯು ಕೆಲ ರೈತರಿಂದ ತಾನು ಖರೀದಿಸಿ ನಿರ್ದಿಷ್ಟಪಡಿಸಿದ ಭೂಮಿಗೆ ಕಂಪೌಂಡ್ ನಿರ್ಮಾಣ ಮಾಡಿದೆ. ಇದೇ 12ರಂದು ಗ್ರಿಡ್ ನಿರ್ಮಾಣಕ್ಕೆ ಶಂಕು ಸ್ಥಾಪನೆಗೆ ಭರದ ಸಿದ್ಧತೆಗಳನ್ನು ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.