ADVERTISEMENT

ನಿರ್ವಹಣೆ ನಿರ್ಲಕ್ಷ್ಯದಲ್ಲಿ ಮುಖ್ಯ ನಾಲೆ

ನಾರಾಯಣಪುರ ಬಲದಂಡೆ ನಾಲೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 8:09 IST
Last Updated 12 ಏಪ್ರಿಲ್ 2013, 8:09 IST

ಲಿಂಗಸುಗೂರ: ರಾಯಚೂರು ಜಿಲ್ಲೆಯ ಲಿಂಗಸುಗೂರ, ದೇವದುರ್ಗ, ರಾಯಚೂರು ತಾಲ್ಲೂಕುಗಳ ರೈತರ ಜೀವನಾಡಿ ನಾರಾಯಣಪುರ ಬಲದಂಡೆ ನಾಲೆ ಸಮರ್ಪಕವಾಗಿ ನೀರು ಪರಿಸುವಲ್ಲಿ ವಿಫಲವಾಗಿದೆ. ಮುಖ್ಯನಾಲೆ, ವಿತರಣಾ ನಾಲೆ, ಸೀಳುಗಾಲುವೆಗಳ ಮೇಲುಸ್ತುವಾರಿ ಮತ್ತು ನಿರ್ವಹಣೆ ನಿರ್ಲಕ್ಷ್ಯದಿಂದ ರೈತರ ಕನಸು ಭಗ್ನವಾಗುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ 13 ವರ್ಷಗಳ ಹಿಂದೆ ರೈತರ ಜಮೀನಿಗೆ ನೀರು ಹರಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ನೀರು ಹರಿಸಲು ಆರಂಭಿಸಲಾಗಿದೆ. ಮುಖ್ಯ ನಾಲೆಯಿಂದ ಹರಿಯುವ ನೀರು ವ್ಯರ್ಥವಾಗದಂತೆ ಒಳಮೈ ಎರಡು ಮಗ್ಗಲು ಕಾಂಕ್ರಿಟ್ ಲೈನಿಂಗ್ ಮಾಡಲಾಗಿತ್ತು. 0 ದಿಂದ 40ಕಿ.ಮೀ. ವರೆಗೆ ಲೈನಿಂಗ್ ಮಾಡುವಲ್ಲಿ ಕೂಡ ಹಣ ದುರ್ಬಳಕೆ ಮಾಡಿಕೊಳ್ಳಲಾಯಿತು. ಮಾಡಿರುವ ಲೈನಿಂಗ್ ಭಾಗಶಃ ಕಿತ್ತು ಮುಖ್ಯ ನಾಲೆ ದುಸ್ಥಿತಿಗೆ ತಲುಪಿದ್ದು ರೈತರು ಆತಂಕಕ್ಕೊಳಗಾಗಿದ್ದಾರೆ.

ಮುಖ್ಯ ನಾಲೆ ಎರಡು ಬದಿಯಲ್ಲಿನ ವೀಕ್ಷಣಾ ರಸ್ತೆಗಳು ಮುಳ್ಳುಕಂಟಿ ಬೆಳೆದು, ಖಾಸಗಿ ವ್ಯಕ್ತಿಗಳು ಮರಮ್ ಹೊಡೆದು ಬಂದ್ ಆಗಿವೆ. ಮುಖ್ಯ ನಾಲೆ ವೀಕ್ಷಣೆ ಸಾಧ್ಯವಾಗದೆ ಅನಾಥ ಸ್ಥಿತಿಯಲ್ಲಿದೆ. ವಿತರಣಾ ನಾಲೆ, ಉಪಕಾಲುವೆ, ಹೊಲಗಾಲುವೆಗಳ ಸ್ಥಿತಿಗತಿ ಹೇಳತೀರದು. ಈ ಕುರಿತಂತೆ ಹಲವಾರು ಬಾರಿ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳ ಗಮನ ಸೆಳೆದರು ಕೂಡ ದುರಸ್ತಿಗೆ ಮುಂದಾಗುತ್ತಿಲ್ಲ. ಎಡದಂಡೆ ನಾಲೆಗೆ ಸಾವಿರಾರು ಕೋಟಿ ಬಿಡುಗಡೆ ಮಾಡಿದ ಸರ್ಕಾರ ಬಲದಂಡೆ ನಾಲೆ ಬಗ್ಗೆ ಬಿಡಿಕಾಸು ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಮುಂಗಾರು ಮಳೆ ಆರಂಭಗೊಳ್ಳುವ ಮುನ್ನವೆ ಸರ್ಕಾರ ಮುಖ್ಯನಾಲೆ ಸೇರಿದಂತೆ ಇತರೆ ನಾಲೆಗಳ ಶಾಶ್ವತ ದುರಸ್ತಿಗೆ ಮುಂದಾಗಬೇಕು. ಇಲ್ಲದೆ ಹೋದಲ್ಲಿ ಕಾಲಘಟ್ಟದಲ್ಲಿ ಮುಖ್ಯನಾಲೆ ಕುಸಿದು ಇತರೆ ನಾಲೆಗಳು ಅಸ್ಥಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಮುಂದಾಗದೆ ಹೋದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.