ADVERTISEMENT

ನೈಜ ಫಲಾನುಭವಿ ಕಷ್ಟಕ್ಕೆ ಸ್ಪಂದಿಸುವವರ‌್ಯಾರು?

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 9:50 IST
Last Updated 3 ಫೆಬ್ರುವರಿ 2012, 9:50 IST

ರಾಯಚೂರು: ಜಿಲ್ಲೆಯಲ್ಲಿ 2009ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಮುಂದಾಗಿ  ಜಿಲ್ಲೆಯ 52 ಗ್ರಾಮ ಸ್ಥಳಾಂತರಿಸಿ 12,473 ಮನೆ ನಿರ್ಮಾಣ ಕೈಗೊಂಡಿದೆ. ಆದರೆ ಈವರೆಗೂ ನಿರ್ಮಿಸಿದ ಮನೆಗಳಲ್ಲಿ ಕೆಲ ಸಂತ್ರಸ್ಥರಿಗೆ ಮಾತ್ರ ದೊರಕಿ ಇನ್ನೂ ಕೆಲ ಫಲಾನುಭವಿಗಳು ಮನೆಗಳಿಲ್ಲದೇ ಸಮಸ್ಯೆಯಲ್ಲಿಯೇ ಕಾಲ ಕಳೆಯುವಂಥ ಸ್ಥಿತಿ ಕಂಡು ಬರುತ್ತಿದೆ.

ಜಿಲ್ಲಾಡಳಿತದ ಪ್ರಕಾರ ಈಗಾಗಲೇ 9,665 ಮನೆಗಳನ್ನು ಆಸರೆ ಯೋಜನೆಯಡಿ ನೆರೆ ಸಂತ್ರಸ್ತರಿಗೆ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಮಾರ್ಚ್ ಅಂತ್ಯದೊಳಗೆ ಇನ್ನುಳಿದ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ ಎಂದು ಹೇಳಿದೆ. ಆದರೆ, ಈಗಾಗಲೇ ಕೆಲ ಕಡೆ ನಿರ್ಮಿಸಿದ ಮನೆಗಳನ್ನೇ ಸಮರ್ಪಕ ರೀತಿ ಹಂಚಿಕೆ ಮಾಡಿಲ್ಲ. ಇನ್ನೂ ಕೆಲ ಕಡೆ ನಿರ್ಮಿಸಿದ ಮನೆಗಳ ಹಂಚಿಕೆಗೆ ಮುಂದಾಗಿಲ್ಲ. ಕೆಲ ಕಡೆ ನಿರ್ಮಾಣ ಅಮೆ ವೇಗದಲ್ಲಿ ಸಾಗುತ್ತಿದೆ ಎಂದು ನೆರೆ ಸಂತ್ರಸ್ತರು ಅಸಮಾಧಾನ ತೋಡಿಕೊಳ್ಳುತ್ತಾರೆ.

ಈ ಬಗ್ಗೆ ಎರಡು ವರ್ಷದಿಂದಲೂ ಫಲಾನುಭವಿಗಳು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಫಲಾನುಭವಿಗಳು ಆರೋಪಿಸುತ್ತಾರೆ.
ನೈಜ ಫಲಾನುಭವಿಗಳಿಗೆ ಮನೆ ಹಂಚಿಕೆಯಾಗಿಲ್ಲ ಎಂಬ ದೂರುಗಳು ಜಿಲ್ಲೆಗೆ ಭೇಟಿ ನೀಡಿದ  ಜಿಲ್ಲಾ ಉಸ್ತುವಾರಿ ಸಚಿವರು, ವಸತಿ ಸಚಿವರಿಗೆ ಹಾಗೂ ಇನ್ನಿತರ ಸಚಿವರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಮಸ್ಯೆ ಹೇಳಿಕೊಳ್ಳುತ್ತಾರೆ.

ಇಲ್ಲಿಯವರೆಗೆ ಜಿಲ್ಲೆಯ ಮನೆ ದೊರಕದ ಫಲಾನುಭವಿಗಳು ಸಲ್ಲಿಸಿದ ದೂರುಗಳು, ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.ರಾಯಚೂರು ತಾಲ್ಲೂಕಿನ ಜಾಗೀರ ವೆಂಕಟಾಪುರ ಗ್ರಾಮದಲ್ಲಿ ನೆರೆ ಸಂತ್ರಸ್ತ ನೈಜ ಫಲಾನುಭವಿಗಳಾದ ತಮಗೆ  ಮನೆ ಹಂಚಿಕೆ ಸಂದರ್ಭದಲ್ಲಿ ನಿರ್ಲಕ್ಷಿಸಲಾಗಿದೆ.
 
ಮನೆ ದೊರಕಿಸಿಲ್ಲ ಎಂದು ಕೆಲ ನೆರೆ ಸಂತ್ರಸ್ತ ಕುಟುಂಬ ವರ್ಗದವರು ಹೋರಾಟ ಮಾಡಿದ್ದರು. ಪೊಲೀಸ್ ಪ್ರಕರಣಗಳು ದಾಖಲಾಗಿದ್ದವು. ಪದೇ ಪದೇ ತಮಗಾದ ಅನ್ಯಾಯದ ಬಗ್ಗೆ ಸರ್ಕಾರದ ಮೊರೆ ಹೋದರೂ ಸ್ಪಂದನೆ ಮಾತ್ರ ದೊರಕಿಲ್ಲ ಎಂಬ ನೋವು ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಆಸರೆ ಮನೆನಿರ್ಮಾಣಗೊಂಡರೂ ನೈಜ ಫಲಾನುಭವಿಗಳನ್ನು ತಲುಪುವಲ್ಲಿ ಹತ್ತಾರು ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ.
 
ಈ ಸಮಸ್ಯೆ ಪರಿಹರಿಸಿ ನೈಜ ಫಲಾನುಭವಿಗಳಿಗೆ ಮನೆ ದೊರಕಿಸಿದರೆ ಸಹಾಯವಾಗುತ್ತದೆ ಎಂದು ನೆರೆ ಸಂತ್ರಸ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.