ADVERTISEMENT

ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಸತ್ಯಾಗ್ರಹಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 9:10 IST
Last Updated 8 ಜೂನ್ 2011, 9:10 IST

ಲಿಂಗಸುಗೂರ: ದೇಶದ ಹಿತದೃಷ್ಟಿಯಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಯೋಗ ಗುರು ರಾಮ್‌ದೇವ್ ಗುರೂಜಿ ಆರಂಭಿಸಿರುವ ಶಾಂತಿಯುತ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಅನುಸರಿಸಿದ ಕ್ರಮ ಖಂಡನೀಯ. ಅಂತೆಯೆ ಗುರೂಜಿ ಆರಂಭಿಸಿರುವ ಸತ್ಯಾಗ್ರಹಕ್ಕೆ ಸ್ಥಳೀಯ ವಕೀಲರ ಸಂಘದ ಸದಸ್ಯರು ನ್ಯಾಯಾಲಯ ಕಲಾಪ ಬಹಿಷ್ಕರಿಸುವ ಮೂಲಕ ಮಂಗಳವಾರ ಬೆಂಬಲ ವ್ಯಕ್ತಪಡಿಸಿದರು.

ಕಳೆದ ನಾಲ್ಕು ದಿನಗಳ ಹಿಂದೆ ಗುರೂಜಿ ಅವರ ಸಾರಥ್ಯದಲ್ಲಿ ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ಭಕ್ತರು ಶಾಂತಿಯುತ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು, ಮಕ್ಕಳು, ವಯೋವೃದ್ಧರು ನಿದ್ರಾವಸ್ತೆಯಲ್ಲಿರುವಾಗ ಮಧ್ಯರಾತ್ರಿ ಪೊಲೀಸ್ ಮುಖಾಂತರ ದೌರ್ಜನ್ಯ ನಡೆಸಿ, ಸತ್ಯಾಗ್ರಹ ಹತ್ತಿಕ್ಕುವ ಯತ್ನ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ. ರಾಷ್ಟ್ರ ವಿರೋಧಿ ಕೃತ್ಯ ಎಸಗುವವರ ಮೇಲೆ ಇಂತಹ ದಬ್ಬಾಳಿಕೆ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮ್‌ದೇವ್ ಗುರೂಜಿ ದೇಶದ ಕೋಟ್ಯಂತರ ನಾಗರಿಕರ ಭಾವನೆಗಳ ಸ್ಫೂರ್ತಿಯಾಗಿ ಹೋರಾಟ ಆರಂಭಿಸಿದ್ದಾರೆ. ಅಂತಹ ಹೋರಾಟಕ್ಕೆ ರಾಷ್ಟ್ರವ್ಯಾಪಿ ಬೆಂಬಲ ವ್ಯಕ್ತವಾಗಿದೆ. ಕಾರಣ ಕೂಡಲೆ ಗುರೂಜಿ ಕೇಂದ್ರ ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಗಳಿಗೆ ಸ್ಪಂದಿಸಿ, ಪ್ರಜಾತಂತ್ರ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಎಂ.ರಾಚಪ್ಪ ಮೂಲಕ ಅರ್ಪಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ರಾಜಶೇಖರ ನೇತೃತ್ವದಲ್ಲಿ ಕಲಾಪ ಬಹಿಷ್ಕರಿಸಿದ ವಕೀಲರು ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿ ಮನವಿ ಅರ್ಪಿಸಿದರು. ಹಿರಿಯ ವಕೀಲರಾದ ಶಂಕಗೌಡ ಪಾಟೀಲ, ಎಂ.ವಿ. ಜಹಗೀರದಾರ, ಜೆ.ಬಿ. ಪಾಟೀಲ, ಮಹಿಬೂಬಅಲಿ, ಕೆ.ಕೆ. ವಿಶ್ವನಾಥ, ಬಸವರಾಜ, ಮಹಾಲಿಂಗಪ್ಪ, ಅಮರೇಶ ಪಾಟೀಲ, ದೇವೇಂದ್ರ ನಾಯ್ಕ, ವೆಂಕಟೇಶ ಮುತಾಲಿಕ, ಎಂ.ರಾಘವೇಂದ್ರ, ಚಂದ್ರಶೇಖರ, ಭಾಷುಮಿಯಾ, ನಾಗರಾಜ ಎಲಿಗಾರ, ಶಿವಪ್ಪ ಹೊನ್ನಳ್ಳಿ, ಹನುಮಂತಪ್ಪ, ಕುಪ್ಪಣ್ಣ ಕೋಠ, ಶಮ್‌ಸುದ್ದೀನ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.