ADVERTISEMENT

ಪಟ್ಟಣ ಅಭಿವೃದ್ಧಿಗೆ ರೂ. 3.22 ಕೋಟಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 8:55 IST
Last Updated 25 ಮಾರ್ಚ್ 2011, 8:55 IST
ಪಟ್ಟಣ ಅಭಿವೃದ್ಧಿಗೆ ರೂ. 3.22 ಕೋಟಿ ಬೇಡಿಕೆ
ಪಟ್ಟಣ ಅಭಿವೃದ್ಧಿಗೆ ರೂ. 3.22 ಕೋಟಿ ಬೇಡಿಕೆ   

ದೇವದುರ್ಗ: ಕ್ರೀಡಾಂಗಣ ರಸ್ತೆಗಾಗಿ ಪುರಸಭೆ ವತಿಯಿಂದ ನೀಡಲಾದ ರೂ. 29 ಲಕ್ಷ ಕೂಡಲೇ ವಾಪಸ್ ಪಡೆಯುವುದು ಸೇರಿದಂತೆ ಪಟ್ಟಣಕ್ಕೆ ಪಕ್ಕದ ಕೃಷ್ಣಾ ನದಿಯಿಂದ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರಿನ ಜಾಕ್‌ವೆಲ್‌ನಿಂದ ಜೋಳದಹೆಡ್ಗಿ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಸ್ಥಳ ನೀಡಲು ದೊಂಡಂಬಳಿ ಗ್ರಾಮ ಪಂಚಾಯಿತಿ ವತಿಯಿಂದ ಪುರಸಭೆಗೆ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸುವ ಜತೆಗೆ ಪುರಸಭೆಯ ನಲ್ಲಿಗಳಿಗೆ ಮೋಟಾರ್ ಅಳವಡಿಸಿ ಆಕ್ರಮವಾಗಿ ನೀರು ಪಡೆಯವರಿಗೆ 500 ರೂಪಾಯಿ ದಂಡ ವಿಧಿಸುವ ಕುರಿತು ಪುರಸಭೆ ಆಡಳಿತ ಗುರುವಾರ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ.

ಶಹರಿ ಮಹಿಳಾ ರೋಜಗಾರ ಕಟ್ಟಡದಲ್ಲಿ ಗುರುವಾರ ಪುರಸಭೆ ಅಧ್ಯಕ್ಷೆ ಲೋಕಮ್ಮ ಅಮರಣ್ಣಗೌಡ ಅವರ ಅಧ್ಯಕ್ಷೆತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವಸದಸ್ಯರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ಈಗಾಗಲೇ ಪಟ್ಟಣಕ್ಕೆ ಸರಬರಾಜು ಮಾಡಲಾಗುವ ಜಾಕ್‌ವೆಲ್‌ಗೆ ನದಿಯಿಂದ ನೀರು ಎತ್ತಲಾಗುತ್ತಿದೆ. ಅಲ್ಲಿಂದ ಜೋಳದಹೆಡ್ಗಿ ಗ್ರಾಮಕ್ಕೆ ಸುಮಾರು ಐದು ಹೆಚ್.ಪಿ ಮೋಟಾರ್ ಮೂಲಕ ಪ್ರತಿನಿತ್ಯ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದ ಜನಸಂಖ್ಯೆಗೆ ಜಾಕವೆಲ್‌ನಲ್ಲಿ ಸಂಗ್ರಹವಾಗುವ ನೀರು ಸಾಲುತ್ತಿಲ್ಲ ಪುನ ಜೋಳದಹೆಡ್ಗಿ ಗ್ರಾಮದ ಕುಡಿಯುವ ನೀರಿನ ಯೋಜನೆಗೆ ಸ್ಥಳ ನೀಡಿದರೆ ಪಟ್ಟಣಕ್ಕೆ ನೀರಿನ ತೊಂದರೆ ಹೆಚ್ಚಾಗುವ ಸಾಧ್ಯತೆ ಇರುವ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ ನಂತರ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಅರ್ಜಿಯನ್ನು ತಿರಸ್ಕರಿಸಲಾಯಿತು.

ಅಭಿವೃದ್ಧಿ: ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ತಪ್ಪರಗುಂಡ ಮಸೀದಿ ಮತ್ತು ದರ್ಬಾರದಿಂದ ಪೊಲೀಸ್ ಠಾಣೆವರೆಗಿನ ಮುಖ್ಯ ರಸ್ತೆಯನ್ನು ಈಗಾಗಲೇ ವಿಸ್ತರಣೆ ಮಾಡಲಾಗಿದ್ದು, ಸದ್ರಿ ರಸ್ತೆ ಅಭಿವೃದ್ಧಿ ಸೇರಿದಂತೆ ಚರಂಡಿ ನಿರ್ಮಾಣಕ್ಕಾಗಿ ಸುಮಾರು 32250000 ರೂಪಾಯಿಯ ಬೇಡಿಕೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಎಂಜಿನಿಯರ್ ಕೆ. ಶರಣಪ್ಪ ಅವರು ಸಭೆಯಲ್ಲಿ ತಿಳಿಸಿದಾಗ ಅದಕ್ಕೆ ಸದಸ್ಯರಾದ ಜಿ. ಪ್ರಭು ಮತ್ತು ಮುನೀರ ಪಾಶಾ ಅವರು ಚರಂಡಿಯನ್ನು ರಸ್ತೆಗಿಂತ ಎತ್ತರದಲ್ಲಿ ನಿರ್ಮಿಸುವುದು ಸೂಕ್ತ ಎಂದಾಗ ಸದಸ್ಯ ಸಿ. ರಮೇಶ ಅವರು ಮಾತನಾಡಿ, ಒಟ್ಟಾರೆ ಪಟ್ಟಣದ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ತಾಂತ್ರಿಕವಾಗಿ ಮಾಡಲು ಸೂಚಿಸಿದರು. ಸಾರ್ವಜನಿಕ ನಲ್ಲಿ ಊಮೋಟಾರ್ ಅವಳಡಿಸಿ ಆಕ್ರಮವಾಗಿ ನೀರುಪಡೆದರೆ ರೂ. 500 ದಂಡ ವಿಧಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಹಣ ವಾಪಸ್: ಪಟ್ಟಣದ ಹೊರವಲಯದಲ್ಲಿ ರ್ನಿಸಲಾಗುತ್ತಿರುವ ಕ್ರೀಡಾಂಗಣ ರಸ್ತೆಗಾಗಿ ಪುರಸಭೆ ವತಿಯಿಂದ ನೀಡಲಾದ 29 ಲಕ್ಷ ರೂಪಾಯಿಯನ್ನು ಕ್ರೀಡಾಂಗಣ ಕಾಮಗಾರಿ ನೆನೆಗುದಿಗೆ ಬಿದ್ದಿರುವುದರಿಂದ ಕೂಡಲೇ ವಾಪಸ್ ನೀಡುವಂತೆ ನಿರ್ಮಿತ ಕೇಂದ್ರಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಸಲಾಯಿತು. ಪಟ್ಟಣದಲ್ಲಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಮಾಸ್ ದೀಪದ ಯೋಜನೆಯ 3 ಲಕ್ಷ ರೂಪಾಯಿ ಬಾಕಿ ಹಣವನ್ನು ಗುತ್ತಿಗೆದಾರರಿಗೆ ನೀಡದಂತೆ ತಡೆಹಿಡಿಯಲು ನಿರ್ಧರಿಸಲಾಯಿತು.

ಸಭೆ ಒಪ್ಪಿಗೆ: ಜನವರಿ 2011ರಿಂದ ಫೆಬ್ರುವರಿ 2011ರವರೆಗಿನ ಜಮಾ ಮತ್ತು ಖರ್ಚುಗಳಿಗೆ ಒಪ್ಪಿಗೆ, ಮಾರ್ಚ್ 10 ರಂದು ಕೈಗೊಂಡ ಸ್ಥಾಯಿ ಸಮಿತಿ ಸಭೆಯ ನಿರ್ಣಗಳನ್ನು ಮತ್ತು ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆಯ ಕುರಿತು ವರದಿ ತಯಾರಿಸುವ ಕುರಿತು ಬಿಡುಗಡೆಯಾದ 16 ಸಾವಿರ ರೂಪಾಯಿಗೆ ಬಳಕೆ ಸೇರಿದಂತೆ ಇತರ ವಿಷಯಗಳಿಗೆ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.ಉಪಾಧ್ಯಕ್ಷ ನಾಗಪ್ಪ ನಾಡದಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಗುಲಾಮ ಮೈಹಿಬೂಬ, ಮುಖ್ಯಾಧಿಕಾರಿ ಚಂದ್ರಶೇಖರ ಹಾಗೂ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.