ADVERTISEMENT

ಪಟ್ಟಣ ಪಂಚಾಯಿತಿಗೆ ಬೀಗ ಹಾಕಿ ಧರಣಿ

ಕವಿತಾಳ: ನೀರಿನ ಸಮಸ್ಯೆಗೆ ಪರಿಹಾರ, ಮೂಲಸೌಕರ್ಯ ಒದಗಿಸಲು ನಿವಾಸಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 10:04 IST
Last Updated 19 ಜೂನ್ 2018, 10:04 IST
ಕವಿತಾಳ ಪಟ್ಟಣ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಮಹಿಳೆಯರ ಸಮಸ್ಯೆ ಆಲಿಸಿದ ಮುಖ್ಯಾಧಿಕಾರಿ ಜೆ.ಟಿ.ರೆಡ್ಡಿ ಹಾಗೂ ಸಬ್ ಇನ್‌ಸ್ಪೆಕ್ಟರ್ ವಿಶ್ವನಾಥ ಚರ್ಚಿಸಿದರು
ಕವಿತಾಳ ಪಟ್ಟಣ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಮಹಿಳೆಯರ ಸಮಸ್ಯೆ ಆಲಿಸಿದ ಮುಖ್ಯಾಧಿಕಾರಿ ಜೆ.ಟಿ.ರೆಡ್ಡಿ ಹಾಗೂ ಸಬ್ ಇನ್‌ಸ್ಪೆಕ್ಟರ್ ವಿಶ್ವನಾಥ ಚರ್ಚಿಸಿದರು   

ಕವಿತಾಳ: ನೀರಿನ ಸಮಸ್ಯೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಇಲ್ಲಿನ 12 ಮತ್ತು 13ನೇ ವಾರ್ಡ್‌ನ ಮಹಿಳೆಯರು ಸೋಮವಾರ ಪಟ್ಟಣ ಪಂಚಾಯಿತಿ ಎದುರು ಖಾಲಿ ಕೊಡಗಳ ಪ್ರದರ್ಶಿಸಿ ಧರಣಿ ನಡೆಸಿದರು.

ಪಟ್ಟಣ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ‘ಕಳೆದ 15 ದಿನಗಳಿಂದ ನೀರು ಸರಬರಾಜು ಸಂಪೂರ್ಣ ಸ್ಥಗಿತವಾಗಿದ್ದು ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ವಾರ್ಡ್‌ನಲ್ಲಿ ಪದೇ ಪದೇ ನೀರಿನ ಸಮಸ್ಯೆ ಉಂಟಾಗುತ್ತಿದೆ. ಪಟ್ಟಣ ಪಂಚಾಯಿತಿ ಆಗಿ ಮೇಲ್ಬರ್ಜೆಗೆ ಏರಿದ ನಂತರವೂ 4-5 ಬಾರಿ  ಪಟ್ಟಣ ಪಂಚಾಯಿತಿ ಬಂದು ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ. ರಸ್ತೆಗಳು ಹಾಳಾಗಿದ್ದು, ಚರಂಡಿಗಳು ತುಂಬಿ ಹರಿಯುತ್ತಿವೆ. ಸ್ವಚ್ಛತೆ ಬಗ್ಗೆ ಭಾಷಣ ಬಿಗಿಯುವ ಅಧಿಕಾರಿಗಳು ಮೂಲ ಸೌಕರ್ಯ ಒದಗಿಸಿಲ್ಲ ಎಂದು ವಾರ್ಡ್‌ ನಿವಾಸಿ ಎಂ. ಸುಮಾ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಪಂಚಾಯಿತಿಯಲ್ಲಿ ಇರದ ಕಾರಣ ಬೀಗ ಹಾಕಿದ ಮಹಿಳೆಯರು ವಾಪಸ್‌ ತೆರಳಿದರು. ನಂತರ ಸ್ಥಳಕ್ಕೆ ಬಂದ ಮುಖ್ಯಾಧಿಕಾರಿ ಜೆ.ಟಿ.ರೆಡ್ಡಿ ಪಂಚಾಯಿತಿಗೆ ಬೀಗ ಹಾಕಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಸಬ್ ಇನ್‌ಸ್ಪೆಕ್ಟರ್ ವಿಶ್ವನಾಥ ಅವರು ವಾರ್ಡ್‌ನ ಮಹಿಳೆಯರನ್ನು ಕರೆಯಿಸಿ ಬೀಗ ತೆರವುಗೊಳಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಮುಖ್ಯಾಧಿ ಕಾರಿ ಜೆ.ಟಿ.ರೆಡ್ಡಿ, ‘ಕೊಳವೆಭಾವಿ ಯಂತ್ರ ಹಾಳಾಗಿದ್ದು, ಶೀಘ್ರ ದುರಸ್ತಿ ಮಾಡಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು. ಬೀದಿ ದೀಪ ಅಳವಡಿಕೆ ಮತ್ತು ಚರಂಡಿ ಸ್ವಚ್ಛತೆಗೆ ಗಮನಹರಿಸಲಾಗುವುದು’ ಎಂದು ಭರವಸೆ ನೀಡಿದರು.

ವಿಜಯಲಕ್ಷ್ಮಿ, ಬಸ್ಸಮ್ಮ, ಮಲ್ಲಮ್ಮ, ರೇಣುಕಮ್ಮ, ಪುಷ್ಪಾ, ನರಸಮ್ಮ ಇಲ್ಲೂರು, ತಾರಮ್ಮ, ಶರಣಮ್ಮ, ದೀಪಾ, ಅಪೂರ್ವ, ಯಂಕಮ್ಮ, ಜಾನಕಿ, ಶಹಾ ಬೇಗಂ, ರಾಘವೇಂದ್ರ ಇಲ್ಲೂರು, ವಿರುಪಾಕ್ಷಿ ಹೂಗಾರ, ಕರಿಬಸ್ಸಯ್ಯ ನಂದಿಕೋಲಮಠ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.