ADVERTISEMENT

ಪಡಿತರ: ನಿತ್ಯ ಪರದಾಟ

ನ್ಯಾಯಬೆಲೆ ಅಂಗಡಿಯವರಿಂದ ಸಿಗದ ಸ್ಪಂದನೆ: ಆರೋಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 9:57 IST
Last Updated 20 ಏಪ್ರಿಲ್ 2018, 9:57 IST

ಲಿಂಗಸುಗೂರು: ಸರ್ಕಾರಿ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲಾಗುವ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ, ಮತ್ತು ಇತರೆ ಪಡಿತರ ಆಹಾರ ಧಾನ್ಯ ಪಡೆಯಲು ಪ್ರತಿ ತಿಂಗಳು ನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ಕೂಲಿ ಮಾಡುವುದು ಬಿಟ್ಟು ಅಲೆದಾಡುವಂತಾಗಿದೆ ಎಂದು ಪಡಿತರ ಕಾರ್ಡ್‌ದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹುತೇಕ ಕಡೆ ಈ ಸಮಸ್ಯೆಯಿದೆ ಎಂದು ಅವರು ದೂರಿದ್ದಾರೆ.

ಬುಧವಾರ  ಈಶ್ವರ ದೇವಸ್ಥಾನ ಬಳಿಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಕಾರ್ಡ್‌ದಾರರು ಮತ್ತು ನ್ಯಾಯಬೆಲೆ ಅಂಗಡಿ ನೌಕರರ ಮಧ್ಯೆ ಬಯೋಮೆಟ್ರಿಕ್‌ಗೆ ಹೆಬ್ಬೆಟ್ಟು ಹಾಕುವ ವಿಷಯಕ್ಕೆ ಸಂಬಂಧಿಸಿ ವಾಗ್ವಾದ ನಡೆಯಿತು. ಎರಡು ದಿನಗಳಿಂದ ಹೆಬ್ಬೆಟ್ಟು ಹಾಕುವ ಯಂತ್ರ ಕೈಕೊಡುತ್ತಿದೆ ಎಂದು ವಾಪಸ್ಸು ಕಳುಹಿಸುತ್ತಿರುವ ವಿಷಯ ಮಹಿಳೆಯರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿತು.

‘ಕಳೆದೆರಡು ದಿನಗಳಿಂದ ಹೆಬ್ಬೆಟ್ಟು ಹಾಕಿಸಿಕೊಳ್ಳುವ ಯಂತ್ರ ಅಥವಾ ನೆಟ್‌ ವರ್ಕ್‌ ಇಲ್ಲ ಎಂದು ನೆಪ ಹೇಳುತ್ತ ನಾಳೆ ಬಾ ಎಂದು ಹೇಳುತ್ತಿದ್ದಾರೆ. ಇಂದು ಬಂದರೆ ಕಂಪ್ಯೂಟರ್‌ ಕೆಟ್ಟಿದೆ ವಾಪಸ್ಸು ಹೋಗಲು ಹೇಳಿದರು’ ಮಹಿಳೆಯರು ತಿಳಿಸಿದರು. ನೌಕರರು ಅಂಗಡಿಗೆ ಬೀಗ ಹಾಕಿಕೊಂಡು ಹೋಗಲು ಮುಂದಾದಾಗ ಆಕ್ರೋಶಗೊಂಡ ಮಹಿಳೆಯರು ಪ್ರತಿಭಟನೆ ನಡೆಸಿದರು.

ADVERTISEMENT

‘ಎಂಟು ತಿಂಗಳಲ್ಲಿ ನಮಗೆ 5 ತಿಂಗಳದ ಅಸಮರ್ಪಕವಾಗಿ ಅಕ್ಕಿ ಗೋಧಿ ವಿತರಿಸಲಾಗಿದೆ. ಉಳಿದ 3 ತಿಂಗಳ ಅಕ್ಕಿ ಗೋಧಿ ಕೇಳಿದರೆ ಈಗಾಗಲೆ ನೀಡಿದ್ದೇವೆ. ನಿಮ್ಮದು ಖರ್ಚಾಗಿದೆ ಎಂದು ಹಾರಿಕೆ ಉತ್ತರ ನೀಡಿ ಅಕ್ರಮ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ನ್ಯಾಯ ಕೇಳಿದವರಿಗೆ ಪಡಿತರ ನೀಡಲು ಸತಾಯಿಸುತ್ತಿದ್ದಾರೆ’ ಎಂದು ಪಡಿತರ ಚೀಟಿದಾರರಾದ ದುರುಗಮ್ಮ, ಹುಲಿಗೆಮ್ಮ ಆರೋಪಿಸಿದರು.

‘ಅಂತ್ಯೋದಯ ಕಾರ್ಡ್‌ಗೆ 35 ಕೆಜಿ ಅಕ್ಕಿ ಬದಲು ಕೇವಲ 25 ಕೆಜಿ ನೀಡುತ್ತಿದ್ದಾರೆ. ಪ್ರತಿ ಮಂಗಳವಾರ ರಜೆ ಹೊರತು ಪಡಿಸಿ ಉಳಿದೆಲ್ಲ ದಿನಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8ರ ವರೆಗೆ ನ್ಯಾಯಬೆಲೆ ಅಂಗಡಿ ತೆರೆದಿರಬೇಕು. ವಾರದಲ್ಲಿ ಒಂದೆರಡು ದಿನ ಬೆಳಿಗ್ಗೆ 11ಕ್ಕೆ ತೆರೆದು ಮಧ್ಯಾಹ್ನ 2ಕ್ಕೆ ಬಂದ್‌ ಮಾಡಿಕೊಂಡು ಹೋಗುತ್ತಿರುವ ಬಗ್ಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ’ ಎಂದು ಯೂಸುಫ್ ಸಾಮೂಹಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಆಹಾರ ವಿಭಾಗದ ಶಿರಸ್ತೇದಾರ ಬಿ.ಕೆ. ಕುಲಕರ್ಣಿ ಅವರನ್ನು ಪ್ರಜಾವಾಣಿ ಸಂಪರ್ಕಿಸಿದಾಗ, ‘ತೊಗರಿ ಬೇಳೆ ಹಣ ₹ 38 ಬಿಟ್ಟರೆ ಇನ್ನ್ಯಾವುದೆ ಹಣ ಸ್ವೀಕರಿಸುವುದು ಅಪರಾಧ.ಕಾರ್ಡ್‌ದಾರರಿಂದ ₹ 50 ಸ್ವೀಕರಿಸುತ್ತಿರುವ ಬಗ್ಗೆ ಲಿಖಿತ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ನ್ಯಾಯಬೆಲೆ ಅಂಗಡಿಗಳನ್ನು ನಿತ್ಯ ಬೆಳಿಗ್ಗೆ 8 ರಿಂದ ರಾತ್ರಿ 8ರ ವರೆಗೆ (ಮಧ್ಯಾಹ್ನ ವಿಶ್ರಾಂತಿ) ತೆರೆದಿರುವುದು ಕಡ್ಡಾಯ’ ಎಂದು ಅವರು ಸ್ಪಷ್ಟಪಡಿಸಿದರು.

**

ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ವಿತರಣೆ ಆಗುತ್ತಿಲ್ಲ ಎಂಬ ಆರೋಪ ಇದೆ. ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು – ಬಿ.ಕೆ. ಕುಲಕರ್ಣಿ, ಶಿರಸ್ತೇದಾರ, ಆಹಾರ ವಿಭಾಗ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.