ADVERTISEMENT

ಪ.ಪಂ ಅವ್ಯವಹಾರ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 10:23 IST
Last Updated 19 ಜೂನ್ 2013, 10:23 IST
ಲಿಂಗಸುಗೂರ ತಾಲ್ಲೂಕಿನ ಮುದಗಲ್ಲ ಪಟ್ಟಣ ಪಂಚಾಯಿತಿಯಲ್ಲಿನ ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು  ಪೌರಾಡಳಿತ ಸಚಿವರಿಗೆ ಬರೆದ ಪತ್ರವನ್ನು ಉಪವಿಭಾಗಾಧಿಕಾರಿ ಕಚೇರಿಯ ಶಿರಸ್ತೆದಾರರಾದ ಭಾನುಮತಿ ಅವರಿಗೆ ಸಲ್ಲಿಸಿದರು
ಲಿಂಗಸುಗೂರ ತಾಲ್ಲೂಕಿನ ಮುದಗಲ್ಲ ಪಟ್ಟಣ ಪಂಚಾಯಿತಿಯಲ್ಲಿನ ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪೌರಾಡಳಿತ ಸಚಿವರಿಗೆ ಬರೆದ ಪತ್ರವನ್ನು ಉಪವಿಭಾಗಾಧಿಕಾರಿ ಕಚೇರಿಯ ಶಿರಸ್ತೆದಾರರಾದ ಭಾನುಮತಿ ಅವರಿಗೆ ಸಲ್ಲಿಸಿದರು   

ಲಿಂಗಸುಗೂರ: ತಾಲ್ಲೂಕಿನ ಮುದಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಹತ್ತು ವರ್ಷಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ವಿವಿಧ ಯೋಜನೆಗಳಡಿ ಮಂಜೂರಾದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪೌರಾಡಳಿತ ಸಚಿವರಿಗೆ  ಬರೆದ ಮನವಿಪತ್ರವನ್ನು ಉಪವಿಭಾಗಾಧಿಕಾರಿ ಕಚೇರಿಯ ಶಿರಸ್ತೆದಾರರಾದ ಭಾನುಮತಿ ಅವರಿಗೆ ಸಲ್ಲಿಸಿದರು.

`ಪಟ್ಟಣ ಪಂಚಾಯಿತಿಯಲ್ಲಿ ಈ ಹಿಂದೆ ತನಿಖೆಗೆ ಒಳಪಟ್ಟ ಪ್ರಕರಣಗಳನ್ನು ಮುಚ್ಚಿಟ್ಟು, ಆಡಳಿತ ನಡೆಸಲಾಗುತ್ತಿದೆ. ಆಡಳಿತಾಧಿಕಾರಿ ತಹಸೀಲ್ದಾರ ಮಹಾಜನ ಮತ್ತು ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಭಾರಿ ಭ್ರಷ್ಟಾಚಾರ ನಡೆಸಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.

ಈ ಹಿಂದೆ ವಾಣಿಜ್ಯ ಮಳಿಗೆಗಳನ್ನು  8-10 ಸಾವಿರ ರೂಪಾಯಿಗಳಿಗೆ ಒಂದರಂತೆ ಬಹಿರಂಗ ಹರಾಜು ಮಾಡಲಾಗಿತ್ತು. ಈಗ ವ್ಯಾಪಾರಸ್ಥರೊಂದಿಗೆ ಶ್ಯಾಮೀಲಾಗಿ  ಕೇವಲ  3-4 ಸಾವಿರ ರೂಪಾಯಿಗಳಿಗೆ ಒಂದರಂತೆ ಬಾಡಿಗೆಗೆ ನೀಡಿ, ಭಾರಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.

`ನಮ್ಮ ಮನೆ' ಯೋಜನೆಯಡಿ ಸಬ್ಸಿಡಿ ಚೆಕ್ ವಿತರಿಸಲು ಲಂಚ ಕೇಳಲಾಗುತ್ತಿದೆ. ಲಂಚ ನೀಡಲು ನಿರಾಕರಿಸಿದರೆ ಸಬ್ಸಿಡಿ ಚೆಕ್ ನೀಡದೆ ವಂಚನೆ ಮಾಡಲಾಗುತ್ತಿದೆ. ಪಟ್ಟಣ ಪಂಚಾಯಿತಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಜಿಲಾನಿ ಪಾಷ, ಮುಖಂಡರಾದ ಶಿವರಾಜ, ಅಜೀಜ ಪಾಷ, ಆಂಜನೇಯ, ಬಿ.ಎಸ್. ನಾಯಕ, ಚಂದ್ರು, ಅಮರೇಶ, ನಿತೀನ್, ರಾಘು, ಯಲ್ಲಪ್ಪ, ರಾಕೇಶ, ಜಗದೀಶ, ತಿಪ್ಪಣ್ಣ, ನಾಗರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.