ADVERTISEMENT

ಪಿಂಚಣಿ ಸಾರ್ವತ್ರೀಕರಣಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 6:25 IST
Last Updated 1 ಆಗಸ್ಟ್ 2012, 6:25 IST

ರಾಯಚೂರು: ಪಿಂಚಣಿ ಸಾರ್ವತ್ರೀಕರಣಗೊಳಿಸಬೇಕು ಹಾಗೂ ಪಿಂಚಣಿಯ ನಗದು ಕನಿಷ್ಠ ವೇತನದ ಅರ್ಧದಷ್ಟು ಅಥವಾ ಎರಡು ಸಾವಿರ ರೂಪಾಯಿ ಯಾವುದು ಅಧಿಕ ಮೊತ್ತ ಅದನ್ನು ಪಾವತಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಅಸಂಘಟಿತರಿಗೆ ಭದ್ರತೆ ಕಲ್ಪಿಸುವುದು ಸರ್ಕಾರ ಆದ್ಯ ಕರ್ತವ್ಯವಾಗಿದೆ. ವೇತನ ಪ್ರತಿಯೊಬ್ಬ ವ್ಯಕ್ತಿಗೆ ವ್ಯಕ್ತಿಗತ ಸಾಮಾಜಿಕ ಭದ್ರತೆಯಾಗಿದೆ. ಪ್ರತಿಯೊಬ್ಬ ಅರ್ಹ ಪ್ರಜೆಗೂ ಪಿಂಚಣಿ ಲಭ್ಯವಾಗಬೇಕು ಎಂದು ಆಗ್ರಹಿಸಿದರು.

ಪಿಂಚಣಿ ಸಾರ್ವತ್ರೀಕರಣಗೊಳಿಸುವ ಜನಾಂದೋಲನ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಪ್ರಗತಿಪರ ಮತ್ತು ಶೋಷಿತ ಸಂಘಟನೆಗಳು ಒಂದಾಗಿ ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್ ವೇದಿಕೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ಎರಡು ವರ್ಷಕ್ಕೆ ಒಂದು ಬಾರಿ ಪಿಂಚಣಿ ಹೆಚ್ಚಳವಾಗಬೇಕು, ಹಿರಿಯ ನಾಗಕರ ಪಿಂಚಣಿ ಪಡೆಯುವ ಸಲುವಾಗಿ ಯಾರನ್ನು ಬಲವಂತವಾಗಿ ಸೇವೆಯಿಂದ ನಿವೃತ್ತಿಗೊಳಿಸಬಾರದು, ಪಿಂಚಣಿಗೆ ಏಕಗವಾಕ್ಷಿ ವ್ಯವಸ್ಥೆ ಮಾಡಬೇಕು, 50 ವರ್ಷ ತುಂಬಿದ ಎಲ್ಲ ಮಹಿಳೆಯರಿಗೆ ಹಾಗೂ 55 ವರ್ಷ ತುಂಬಿದ ಪುರುಷರಿಗೆ  ಪಿಂಚಣಿ ದೊರಕಬೇಕು ಎಂದು ಆಗ್ರಹಿಸಿದರು.

ಪಿಂಚಣಿ ಪಡೆಯುವ ಅಸಂಘಟಿತ ವಲಯದ ಕಾರ್ಮಿಕರಿಗೆ, ಶೋಷಣೆಗೊಳಗಾದ, ಲೈಂಗಿಕ ಅಲ್ಪಸಂಖ್ಯಾತರು,  ಸಮಾಜದ ಕೆಳಸ್ಥರದ ಕಾರ್ಮಿಕರಿಗೆ ಪಿಂಚಣಿ ವಯಸ್ಸು 45ಕ್ಕೆ ನಿಗದಿಪಡಿಸಬೇಕು  ಎಂಬುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಅಭಯ ಕುಮಾರ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಮಂಜುಳಾ, ಗೌರಮ್ಮ, ಬಸವರಾಜ, ಗುರುರಾಜ, ಹನುಮೇಶ, ಉಷಾ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.