ADVERTISEMENT

ಪುನರ್ವಸತಿ ಬಡಾವಣೆ: ಹಣ ದುರ್ಬಳಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 5:25 IST
Last Updated 19 ಅಕ್ಟೋಬರ್ 2012, 5:25 IST

ಲಿಂಗಸುಗೂರ: ಕಳೆದ 3ವರ್ಷಗಳ ಹಿಂದೆ ಧಾರಾಕಾರವಾಗಿ ಸುರಿದ ಮಳೆಯಿಂದ ಮನೆಗಳು ಕುಸಿದು ಬೀದಿಪಾಲಾಗಿದ್ದ ಸಂತ್ರಸ್ತ ಕುಟುಂಬಗಳ ನೆರವಿಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಪುನರ್ವಸತಿ ಬಡಾವಣೆಗಳ ಅಭಿವೃದ್ಧಿ, ಆಸರೆ ಯೋಜನೆಯಡಿ ಮನೆಗಳ ನಿರ್ಮಾಣದಲ್ಲಿ ಭಾರಿ ಪ್ರಮಾಣದ ಹಣ ದುರ್ಬಳಕೆ ಆಗಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದ್ದು ಕೂಡಲೆ ವಿಶೇಷ ತನಿಖೆಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ತನ್ವಿರಾ ಬಶಿರುದ್ಧೀನ ತಿಳಿಸಿದರು.

ಬುಧವಾರ ತಾಲ್ಲೂಕಿನ ಸ್ಥಳಾಂತರಗೊಂಡ ಸುಣಕಲ್ಲ ಮತ್ತು ಚಿಕ್ಕಉಪ್ಪೇರಿ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಡಾವಣೆಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಹಣ ಬಳಕೆ ಮಾಡುವಂತೆ ಸೂಚಿಸಲಾಗಿತ್ತು. ಕೋಟ್ಯಂತರ ಹಣ ಬಳಕೆ ಮಾಡಿಕೊಂಡಿದ್ದರು ಕೂಡ ರಸ್ತೆ, ಚರಂಡಿ, ಕುಡಿಯುವ ನೀರಿನ ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳದೆ ಅವ್ಯವಸ್ಥೆಯ ಆಗರವಾಗಿ ಕಾಣಿಸುತ್ತದೆ. ನಿರ್ಮಿಸಿದ ಚರಂಡಿಗಳು ಈಗಾಗಲೆ ಕುಸಿದಿರುವುದು ಕಳಪೆತನ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಮನೆಗಳ ನಿರ್ಮಾಣ ಮಾಡುವಲ್ಲಿ ಬಳಸಿದ ಇಟ್ಟಂಗಿ, ಉಸುಕು, ನಿಯಮಿತ ಸಿಮೆಂಟ್ ಬಳಕೆ ಮಾಡದೆ ಹೋಗಿದ್ದರಿಂದ ಬಹುತೇಕ ಕಟ್ಟಡಗಳು ಬಿರುಕು ಕಾಣಿಸಿಕೊಂಡು ಕುಸಿಯುವ ಭೀತಿ ಎದುರಾಗಿದೆ. ಕಟ್ಟಡಗಳ ಗುಣಮಟ್ಟ ಹಾಗೂ ಉದ್ಯೋಗ ಖಾತ್ರಿ ಅಥವಾ ಇತರೆ ಯೋಜನೆಗಳಡಿ ಬಡಾವಣೆಗಳ ಅಭಿವೃದ್ಧಿಗೆ ಮಾಡಿರುವ ಖರ್ಚು ವೆಚ್ಚಗಳ ಸಮಗ್ರ ತನಿಖೆ ನಡೆಸುವ ಅಗತ್ಯತೆ ಎದ್ದುಕಾಣುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ ಎಂದು ಆಡಳಿತ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಭೂಪನಗೌಡ ಕರಡಕಲ್ಲ. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಾನಪ್ಪ ಚವ್ಹಾಣ, ಎಪಿಎಂಸಿ ನಿರ್ದೇಶಕ ಬಸಣ್ಣ ಮೇಟಿ, ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ. ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯದರ್ಶಿ ಚೆನ್ನಾರೆಡ್ಡಿ ಬಿರಾದರ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.