ADVERTISEMENT

ಬಡಾವಣೆ ವಾಸಿಗಳಿಂದ ನಿರಂತರ ಧರಣಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 6:55 IST
Last Updated 1 ಜೂನ್ 2011, 6:55 IST

ರಾಯಚೂರು: ಇಲ್ಲಿನ ನಗರಸಭೆಯ 9 ಮತ್ತು 10ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಗಂಗಾ ನಿವಾಸ ಬಡಾವಣೆಯಲ್ಲಿ ನಗರಸಭೆಯು ತರಾತುರಿಯಲ್ಲಿ ಹಾಗೂ ಬಡಾವಣೆ ಜನಜೀವನಕ್ಕೆ ಮಾರಕವಾಗುವ ರೀತಿಯಲ್ಲಿ ನಿರ್ಮಿಸುತ್ತಿರುವ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಗಂಗಾನಿವಾಸ ಬಡಾವಣೆ ನಿವಾಸಿಗಳು ಕ್ರಾಂತಿಯೋಗಿ ಬಸವೇಶ್ವರ ಸೇವಾ ಸಂಘದ ನೇತೃತ್ವದಲ್ಲಿ ಮಂಗಳವಾರ ಧರಣಿ ನಡೆಸಿದರು.

ಸೋಮವಾರ ರಾತ್ರಿಯಿಂದಲೇ ಈ ರೀತಿ ಧರಣಿ ಆರಂಭಿಸಲಾಗಿದೆ. ಒಳಚರಂಡಿ ನಿರ್ಮಾಣ ಕಾಮಗಾರಿ ರದ್ದುಪಡಿಸುವವರೆಗೂ ಮುಂದುವರಿಯುವುದು ಎಂದು ಸಂಘಟನೆ ಹೇಳಿದೆ.ನಗರಸಭೆ ಈ ಒಳಚರಂಡಿ ನಿರ್ಮಾಣಕ್ಕೆ ಮುಂದಾದಾಗ ಸಂಘಟನೆಯು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು.
 
ಈ ಒಳಚರಂಡಿ ನಿರ್ಮಾಣದಿಂದ ಬಡಾವಣೆ ನಿವಾಸಿಗಳಿಗೆ, ಜನಜೀವನಕ್ಕೆ ಅಪಾಯಕಾರಿಯಾಗಿದೆ. ಕೂಡಲೇ ರದ್ದುಪಡಿಸಲು ನಗರಸಭೆಗೆ ಸೂಚಿಸಲು ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳು ಈ ದಿಶೆಯಲ್ಲಿ ಸೂಚನೆಯನ್ನು ನಗರಸಭೆಗೆ ನೀಡಿದ್ದರು. ಆದಾಗ್ಯೂ ನಗರಸಭೆ ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಧರಣಿ ನಿರತರು ಸಮಸ್ಯೆ ವಿವರಿಸಿದರು.

ನಗರಸಭೆ ತಾಂತ್ರಿಕ ವಿಭಾಗದ ಅಧಿಕಾರಿಗಳ ತಂಡವು, ಮೂರು ದಿನಗಳ ಗಡುವು ನೀಡಬೇಕು. ಈ ಕುರಿತು ಪರಿಶೀಲನೆ ನಡೆಸಿ ನಿರ್ಧರಿಸುವುದಾಗಿ ಹೇಳಿದ್ದಾರೆ. ಆದರೆ, ಇದು ಅಸಂಭವ. ಕೂಡಲೇ ರದ್ದುಪಡಿಸಬೇಕು ಎಂಬುದೇ ತಮ್ಮ ಬೇಡಿಕೆ ಆಗಿದೆ. ಹೀಗಾಗಿ ಧರಣಿ ಮುಂದುವರಿಸಲಾಗುವುದು ಎಂದು ಹೇಳಿದರು.

ಸದ್ಯದ ಯೋಜನೆ ಕೈ ಬಿಡಬೇಕು. ಪುರಾತನ ಒಳಚರಂಡಿ ವ್ಯವಸ್ಥೆಯ ಮಾರ್ಗವಾದ ತೀನ್ ಕಂದೀಲ್ ಅಥವಾ ಆಜಾದ ನಗರ, ಮಾವಿನ ಕೆರೆ, ರಾಜ ಕಾಲುವೆ ಒಳಚರಂಡಿಗೆ ಸಂಪರ್ಕ ಕಲ್ಪಿಸಬೇಕು. ಇದರಿಂದ ಸಮಸ್ಯೆ ಪರಿಹಾರ ಆಗುತ್ತದೆ ಎಂಬುದೇ ತಮ್ಮ ಬೇಡಿಕೆ.
 
ಬೇಡಿಕೆ ಈಡೇರುವವರೆಗೂ ಬಡಾವಣೆ ನಿವಾಸಿಗಳೊಂದಿಗೆ ಧರಣಿ ಮುಂದುವರಿಸುವುದಾಗಿ ಸಂಘಟನೆ ಜಿಲ್ಲಾಧ್ಯಕ್ಷ ಕೆ ರಾಜೇಶಕುಮಾರ ತಿಳಿಸಿದರು.ನಗರಸಭೆ ಅಧಿಕಾರಿಗಳು ಸ್ಥಳೀಯ ನಿವಾಸಿಗಳ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವುದು ಅವಶ್ಯ ಎಂದರು.

ವಿಜಯಕುಮಾರ ಸಿಂಗನೋಡಿ, ತಿಮ್ಮಪ್ಪ ಯಾದವ್, ಅಂಗಡಿ ಮಾರೆಪ್ಪ ನಾಯಕ, ಬಸವಂತಪ್ಪ, ಬಿ ನರಸಿಂಗರಾವ್, ರಮೇಶ ನಾಯಕ, ವಿರೇಶ ನಾಯಕ, ಅನಿಲ್‌ಕುಮಾರ, ಜಂಬಣ್ಣ ಮಡಿವಾಳರ, ವಾಸುದೇವ ವೈದ್ಯ, ಕೆ ರವಿಕುಮಾರ, ಕೃಷ್ಣಾ ಯಾದವ್, ಶಿವ ಯಾದವ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.