ADVERTISEMENT

ಬೆಳಕಿನ ನಿರೀಕ್ಷೆಯಲ್ಲಿ ಕಾರ್ಮಿಕರು

ಉಮಾಪತಿ ಬಿ.ರಾಮೋಜಿ
Published 22 ಅಕ್ಟೋಬರ್ 2017, 7:12 IST
Last Updated 22 ಅಕ್ಟೋಬರ್ 2017, 7:12 IST
ಶಕ್ತಿನಗರದ ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಘಟಕಗಳ ಉತ್ಪಾದನೆಯಲ್ಲಿ ಕಾರ್ಯನಿರತ ದಿನಗೂಲಿ ಕಾರ್ಮಿಕರು.
ಶಕ್ತಿನಗರದ ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಘಟಕಗಳ ಉತ್ಪಾದನೆಯಲ್ಲಿ ಕಾರ್ಯನಿರತ ದಿನಗೂಲಿ ಕಾರ್ಮಿಕರು.   

ಶಕ್ತಿನಗರ: ದೈನಂದಿನ ಜೀವನದಲ್ಲಿ ಕೆಲ ಹೊತ್ತು ಅದರಲ್ಲೂ ರಾತ್ರಿ ವಿದ್ಯುತ್‌ ಪೂರೈಕೆ ಕಡಿತಗೊಂಡರೆ, ಕತ್ತಲೆ ಆವರಿಸಿಕೊಳ್ಳುತ್ತದೆ. ವಿದ್ಯುತ್‌ ಪೂರೈಕೆ ಆಧಾರಿತ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ವಿದ್ಯುತ್‌ ಸೌಲಭ್ಯ ಇರದಿದ್ದರೆ, ಹಲವು ಸ್ವರೂಪದ ಸಮಸ್ಯೆಗಳು ತಲೆದೋರುತ್ತವೆ. ಇಂಥ ಸಂಕಷ್ಟಗಳು ಬಾರದಿರಲಿಯೆಂದೇ ಆರ್‌ಟಿಪಿಎಸ್‌ ಕಾರ್ಮಿಕರು ಕಾರ್ಯನಿರತರಾಗಿದ್ದಾರೆ.

ರಾಯಚೂರು ತಾಲ್ಲೂಕಿನಲ್ಲಿ 24 ಗಂಟೆ ವಿದ್ಯುತ್‌ ಪೂರೈಸುವಲ್ಲಿ ಕಾರ್ಮಿಕರು ಪ್ರಮುಖ ಪಾತ್ರವಹಿಸುತ್ತಾರೆ. ನಿರೀಕ್ಷಿತ ಮಟ್ಟದಲ್ಲಿ ಅವರ ಬೇಡಿಕೆಗಳು ಈಡೇರದಿದ್ದರೂ ಕರ್ತವ್ಯಕ್ಕೆ ಪ್ರಥಮ ಆದ್ಯತೆ ನೀಡುತ್ತಾರೆ. ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಕಾರ್ಯನಿರ್ವಹಿಸುತ್ತಾರೆ.

‘ದಿನಗೂಲಿ ಕಾರ್ಮಿಕರಿಗೆ ಕನಿಷ್ಠ ವೇತನ, ಭವಿಷ್ಯನಿಧಿ, ಸಾಮಾಜಿಕ ಭದ್ರತೆ ಒದಗಿಸಬೇಕು, ಕ್ಯಾಂಟಿನ್‌ ಹಾಗೂ ಆಸ್ಪತ್ರೆ ಸೌಲಭ್ಯ ನೀಡಬೇಕು. ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಗಳು ಅವರದ್ದು. ಇವುಗಳಲ್ಲಿ ಬಹುತೇಕ ಬೇಡಿಕೆಗಳು ಈಡೇರದಿದ್ದರೂ ಒಂದು ದಿನವೂ ವಿದ್ಯುತ್ ಘಟಕಗಳನ್ನು ಬಂದ್ ಮಾಡಿಲ್ಲ.

ADVERTISEMENT

‘ನಮ್ಮ ಬದುಕು ಕತ್ತಲುಮಯವಾದರೂ ತೊಂದರೆಯಿಲ್ಲ. ನಾಡಿನ ಜನರಿಗೆ ನೀಡುವ ಬೆಳಕು ನೀಡುವುದರಲ್ಲಿ ಯಾವುದೇ ರೀತಿಯಲ್ಲಿ ಅಡಚಣೆ ಆಗಬಾರದು ಎಂಬ ಗುರಿ ನಮ್ಮದು. ಈ ಕಾರಣದಿಂದಲೇ ಎಷ್ಟೇ ಸಮಸ್ಯೆ–ಸಂಕಷ್ಟಗಳಿದ್ದರೂ ಅವುಗಳನ್ನು ಲೆಕ್ಕಿಸದೇ ಕೆಲಸ ಮಾಡುತ್ತೇವೆ’ ಎಂದು ಕಾರ್ಮಿಕರು ಹೇಳುತ್ತಾರೆ.

‘ರಾಜ್ಯಕ್ಕೆ ಶೇ 42ರಷ್ಟು ಬೆಳಕು ನೀಡುವ ಆರ್‌ಟಿಪಿಎಸ್ 1,720 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುತ್ತದೆ. ವಿದ್ಯುತ್‌ ಘಟಕಗಳ ನಿರ್ಮಾಣಕ್ಕಾಗಿ ಭೂಮಿ, ಮನೆ ಕಳೆದುಕೊಂಡವರು ಕೆಲಸ ಇಲ್ಲದ ಸಂತ್ರಸ್ಥರು, ವಿದ್ಯುತ್ ಘಟಕದ ಸ್ಥಾವರದ ಕಂಪನಿಯಲ್ಲಿ ದಿನಗೂಲಿಗಾಗಿ 1,500 ಕಾರ್ಮಿಕರು ದುಡಿಯುತ್ತಾರೆ.

ದಿನಕ್ಕೆ 35 ಸಾವಿರ ಮೆಟ್ರಿಕ್‌ ಟನ್‌ ಕಲ್ಲಿದ್ಲಲು ಸುಟ್ಟು ಅದರಿಂದ ಬರುವ ಹಾರುಬೂದಿಯನ್ನು ಹೊರ ಸಾಗಿಸುವ ನಿರ್ವಹಣೆ, ಸೈಲೋ ನಿರ್ವಹಣೆ, ಬಾಯ್ಲರ್‌, ಟರ್ಬನ್, ಮಿಲ್ಲ್‌, ವೆಲ್ಡಿಂಗ್, ಕಟರ್,ಹೆಲ್ಪರ್,ಎಲೆಕ್ಟ್ರಿಷಿಯನ್‌ ಮುಂತಾದ ಹುದ್ದೆಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ವಿದ್ಯುತ್‌ ಕೇಬಲ್‌ಗಳಲ್ಲಿ ನೂರಾರು ಅಡಿ ಎತ್ತರದ ಅಪಾಯದ ಮಟ್ಟದಲ್ಲಿ ಹಾಗೂ ವಿದ್ಯುತ್ ಘಟಕಗಳಿಗೆ ಸರಬರಾಜು ಮಾಡುವ ಕಲ್ಲಿದ್ದಿಲು ಬೆಲ್ಟ್‌ಗಳಲ್ಲಿ ದುಡಿಯುತ್ತಾರೆ.

ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ನಿಶ್ಚಿತ. ಕೆಲಸಕ್ಕೆ ಬರುವ ನಾವು ಸುರಕ್ಷಿತವಾಗಿ ಮನೆಗೆ ಹೋಗುತ್ತೇವೆಯೆಂದು ನಂಬಿಕೆ ಇಲ್ಲ. ಎಷ್ಟೇ ಅಪಾಯವಿದ್ದರೂ ಅದನ್ನು ಲೆಕ್ಕಿಸದೇ ದುಡಿಯುತ್ತೇವೆ’ ಎಂದು ಕಾರ್ಮಿಕರು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.