ADVERTISEMENT

ಬ್ಯಾಂಕ್‌ಗೂ ನೀತಿ ಸಂಹಿತೆ ಅನ್ವಯ

ಜಿಲ್ಲಾ ಚುನಾವಣಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 11:13 IST
Last Updated 5 ಏಪ್ರಿಲ್ 2018, 11:13 IST

ರಾಯಚೂರು: ಜಿಲ್ಲೆಯ ಎಲ್ಲ ಬ್ಯಾಂಕ್‌ ಶಾಖೆಗಳ ವ್ಯವಸ್ಥಾಪಕರಿಗೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಸಂಗತಿ ಗಮನದಲ್ಲಿರಬೇಕು. ಬ್ಯಾಂಕ್‌ ಖಾತೆಗಳಿಗೆ ಸಂಶಯಾಸ್ಪದ ರೀತಿಯಲ್ಲಿ ಹಣ ವರ್ಗಾವಣೆಯಾಗುತ್ತಿದ್ದರೆ ಕೂಡಲೇ ವಿಶೇಷ ಗಮನ ಹರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಬಗಾದಿ ಗೌತಮ್ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಬ್ಯಾಂಕ್ ವ್ಯವಸ್ಥಾಪಕರ ಸಭೆಯಲ್ಲಿ ಮಾತನಾಡಿದರು.ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅವರ ಸಂಬಂಧಿಗಳು ಪ್ರತಿದಿನ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ವರ್ಗಾಯಿಸುತ್ತಿದ್ದರೆ, ಈ ಕುರಿತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲಾಡಳಿತ ವಿವಿಧ ಆಯಾಮಗಳ ಮೂಲಕ ರಾಜಕೀಯ ಚಲನ ವಲನಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿದೆ. ಬ್ಯಾಂಕ್‌ಗಳಿಂದ ಪಡೆಯುವ ಹಣದ ಮೇಲೂ ಕಣ್ಣಿಟ್ಟಿದೆ. ಉದ್ಯೋಗಸ್ಥರಲ್ಲದವರು ಲಕ್ಷಗಟ್ಟಲೆ ಹಣ ವರ್ಗಾಯಿಸುತ್ತಿದ್ದರೆ, ಸಂಶಯಾಸ್ಪದ ರೀತಿಯಲ್ಲಿ ಹಣ ವರ್ಗಾವಣೆಯಾಗುತ್ತಿದ್ದರೆ ಅಂಥವರ ಮಾಹಿತಿಯನ್ನು ಲೀಡ್ ಬ್ಯಾಂಕ್ ಮುಖ್ಯಸ್ಥರಿಗೆ ತಿಳಿಸಬೇಕು ಎಂದರು.

ವಿದೇಶಿ ಹಣ ಹಾಗೂ ದೇಶಿಯ ನಕಲಿ ಹಣ ಚಲಾವಣೆಯಾಗುತ್ತಿದ್ದರೆ, ಈ ಕುರಿತು ಬ್ಯಾಂಕ್‌ಗಳು ತಕ್ಷಣಕ್ಕೆ ಕಾರ್ಯೋನ್ಮುಖರಾಗಬೇಕು. ಎಟಿಎಂ ಮತ್ತು ವಿವಿಧ ಬ್ಯಾಂಕ್‌ಗಳಿಗೆ ಹಣ ಸರಬರಾಜು ಮಾಡುವ ವೇಳೆ ಸರ್ಕಾರಿ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳನ್ನು ಬಳಸಬಾರದು. ಯಾವುದೇ ವೇಳೆ ನಗದು ಸರಬರಾಜು ಮಾಡುವಾಗ ಮೂರನೇ ವ್ಯಕ್ತಿಗೆ ನೀಡಕೂಡದು. ಏಜೆನ್ಸಿ ಮೂಲಕ ಸರಬರಾಜಾಗುವ ವೇಳೆ ಬ್ಯಾಂಕ್‌ಗಳಿಂದ ನೀಡಲ್ಪಡುವ ದಾಖಲಾತಿ, ಬ್ಯಾಂಕ್ ಪತ್ರಗಳನ್ನು ತರಬೇಕು ಎಂದು ಸೂಚಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಲೀಡ್‌ಬ್ಯಾಂಕ್‌ನ ವ್ಯವಸ್ಥಾಪಕ ಮುರಳಿ, ಬ್ಯಾಂಕ್‌ ವ್ಯವಸ್ಥಾಪಕರಾದ ಬಿ.ರಾಜಶೇಖರ, ಮುಖೇಶ, ರಾವತ್ತ, ಎಸ್.ಮಹೇಶ ಇದ್ದರು.

**

ಲಕ್ಷಗಟ್ಟಲೆ ಹಣ ವರ್ಗಾವಣೆ, ಸಂಶಯಾಸ್ಪದ ರೀತಿಯಲ್ಲಿ ಹಣ ವರ್ಗಾವಣೆಯಾಗುತ್ತಿದ್ದರೆ ಅಂಥವರ ಮಾಹಿತಿಯನ್ನು ಲೀಡ್ ಬ್ಯಾಂಕ್ ಮುಖ್ಯಸ್ಥರಿಗೆ ತಿಳಿಸಬೇಕು – ಡಾ.ಬಗಾದಿ ಗೌತಮ್‌, ಜಿಲ್ಲಾ ಚುನಾವಣಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.