ADVERTISEMENT

`ಭಕ್ತರ ನಿರೀಕ್ಷೆಯಂತೆ ಸೇವೆ'

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 10:25 IST
Last Updated 3 ಜೂನ್ 2013, 10:25 IST

ರಾಯಚೂರು: ಶ್ರೀಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ 40ನೇ ಉತ್ತರಾಧಿಕಾರಿಯಾಗಿದ್ದು, ರಾಯರ ಭಕ್ತರ ನಿರೀಕ್ಷೆಯಂತೆ ಗುರು ರಾಘವೇಂದ್ರರ ಸೇವೆ ಸಲ್ಲಿಸಲಾಗುವುದು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ನೂತನ ಪೀಠಾಧಿಪತಿ ಸುಬುದೇಂದ್ರ ತೀರ್ಥರು ನುಡಿದರು.

ಶನಿವಾರ ಮಂತ್ರಾಲಯದಲ್ಲಿ ನಡೆದ ನೂತನ ಪೀಠಾಧಿಪತಿಗಳ ಪುರಪ್ರವೇಶ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಯುವಕರು ಧಾರ್ಮಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಧರ್ಮ ಪ್ರಚಾರ ಕಾರ್ಯ ನಡೆಸಲಾಗುವುದು. ಶ್ರೀ ಮಠವು ಬಡವರು ಹಾಗೂ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಅಗತ್ಯ ಸೌಕರ್ಯ ಕಲ್ಪಿಸಲಿದೆ.

ಆರೋಗ್ಯ ಮತ್ತು ಕುಡಿಯುವ ನೀರಿನ ಸೌಕರ್ಯ ಒದಗಿಸುವ ಹಿನ್ನೆಲೆಯಲ್ಲಿ ಶ್ರೀಮಠ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಮಂತ್ರಾಲಯದ ಗ್ರಾಮ ಹಾಗೂ ವಿದ್ಯಾಪೀಠದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳ ರೂಪಿಸಲಾಗುವುದು. ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹಿರಿಯ ಪೀಠಾಧಿಪತಿಗಳಾದ ಶ್ರೀ ಸುಯತೀಂದ್ರ ತೀರ್ಥರು ಆದೇಶಾನುಸರವಾಗಿ ರಾಘವೇಂದ್ರ ಸ್ವಾಮಿಗಳ ಮಠದ ಸೇವೆ ಸಲ್ಲಿಸಲಾಗುವುದು ಎಂದು ಹೇಳಿದರು.

ನೂತನ ಪೀಠಾಧಿಪತಿಗಳ ಪೂರ್ವಾಶ್ರಮದ ತಂದೆಯವರಾದ ರಾಜಾ ಎಸ್ ಗಿರಿರಾಜಾಚಾರ್ಯ ಮಾತನಾಡಿದದರು. ಸಾನಿಧ್ಯವನ್ನು ಹಿರಿಯ ಪೀಠಾಧಿಪತಿಗಳಾದ ಸುಯತೀಂದ್ರ ತೀರ್ಥರು  ವಹಿಸಿದ್ದರು. ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿ ರಾಜಾಗೋಪಾಲಾಚಾರ್ಯ, ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯ, ಡಾ.ವಾದಿರಾಜಾಚಾರ್ಯ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT