ADVERTISEMENT

`ಮಕ್ಕಳ ಹಕ್ಕು ಉಲ್ಲಂಘಿಸದಂತೆ ಶಿಕ್ಷಕರು ಎಚ್ಚರ ವಹಿಸಲಿ'

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:31 IST
Last Updated 5 ಡಿಸೆಂಬರ್ 2012, 6:31 IST

ರಾಯಚೂರು: ಬಾಲ ಕಾರ್ಮಿಕತೆ, ದುಡಿಮೆ, ಹಿಂಸೆ, ಮಕ್ಕಳ ಹಕ್ಕಿನ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪುನರ್ವಸತಿ ಶಾಲೆಯ ಶಿಕ್ಷಕರದ್ದಾಗಿದೆ ಎಂದು ರಾಯಚೂರು ವಿಭಾಗದ ಸಹಾಯಕ ಆಯುಕ್ತರಾದ ಎನ್ ಮಂಜುಶ್ರಿ ಅವರು ಹೇಳಿದರು.

ಇಲ್ಲಿನ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಬಾಲ ಕಾರ್ಮಿಕ ಪುನರ್ವಸತಿ ಶಾಲೆಯ ಶಿಕ್ಷಕರಿಗೆ ಏರ್ಪಡಿಸಲಾಗಿದ್ದ 5 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಅವರದಲ್ಲದೇ ತಪ್ಪುಗಳಿಗಾಗಿ ಬಾಲ ಕಾರ್ಮಿಕತೆಯಂಥ ಕೂಪಕ್ಕೆ ತಳ್ಳಲ್ಪಡುತ್ತಾರೆ. ಅವರನ್ನು ಹೊರ ತಂದು ಉತ್ತಮ ಶಿಕ್ಷಣ ನೀಡುವದರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.

ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕು ಆಗಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಕಾರ್ಮಿಕ ಅಧಿಕಾರಿ ಆರತಿ ಅವರು ತಿಳಿಸಿದರು.

ತರಬೇತಿಯಲ್ಲಿ ಸಾಮಾಜಿಕ ವಿಶ್ಲೇಷಣೆ, ಮಕ್ಕಳ ಹಕ್ಕುಗಳು, ಬಾಲಕಾರ್ಮಿಕತೆಗೆ ಸಂಬಂಧಿಸಿದ ವಿವಿಧ ಕಾನೂನುಗಳ ಕುರಿತಾದ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ವ್ಯವಸ್ಥೆ ಮಾಡಲಾಗಿತ್ತು.

ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘದ ಹತ್ತು ಅನುಷ್ಠಾನ ಸಂಸ್ಥೆಗಳ ನಿರ್ದೇಶಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಮಂಜುನಾಥರೆಡ್ಡಿ ಸ್ವಾಗತಿಸಿದರು. ಕ್ಷೇತ್ರಾಧಿಕಾರಿ ರವಿಕುಮಾರ ನಿರೂಪಿಸಿದರು. ಅಶೋಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.