ಮಸ್ಕಿ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಸ್ಕಿಯನ್ನು ನಾಲ್ಕು ಸಮಿತಿಗಳು ನೀಡಿರುವ ಶಿಫಾರಸಿನ ಮೇಲೆ ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಸೋಮವಾರ ತಾಲ್ಲೂಕು ಹೋರಾಟ ಸಮಿತಿ ಕರೆ ನೀಡಿದ್ದ ಮಸ್ಕಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬಂದ್ ಹಿನ್ನೆಲೆಯಲ್ಲಿ ಇಲ್ಲಿಯ ಎ್ಲ್ಲಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸಾರಿಗೆ ಸಂಚಾರ ವಿರಳವಾಗಿತ್ತು. ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಣೆಯಿಂದ ಮುಚ್ಚುವ ಮೂಲಕ ಮಸ್ಕಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದವು. ಬಂದ್ ಹಿನ್ನೆಲೆಯಲ್ಲಿ ಜನನಿಬಿಡ ಪ್ರದೇಶಗಳಾದ ಮುಖ್ಯ ಬಜಾರ್, ತೇರ್ ಬಜಾರ್ ವ್ಯಾಪಾರ ಇಲ್ಲದೇ ಬಿಕೋ ಎನ್ನುತ್ತಿದ್ದವು.
ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದಿಂದ ತಾಲ್ಲೂಕು ರಚನೆಗೆ ಆಗ್ರಹಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ರ‌್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕನಕ ವೃತ್ತ, ದೈವದ ಕಟ್ಟೆ, ಸಂತೆ ಬಜಾರ್, ಅಶೋಕ ವೃತ್ತದ ಮೂಲಕ ಹಳೆ ಬಸ್ ನಿಲ್ದಾಣ ಆಗಮಿಸಿದ ರ‌್ಯಾಲಿ ಮಾನವ ಸರಪಳಿ ರಚಿಸಿತು. ಇದರಿಂದಾಗಿ ಕೆಲ ಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು.
ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಕೆ. ವೀರನಗೌಡ, ಮಸ್ಕಿ ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿದರು. ಕಾರ್ಯದರ್ಶಿ ಡಾ. ಶಿವಶರಣಪ್ಪ ಇತ್ಲಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಮುರಾರಿ, ಕಾಂಗ್ರೆಸ್ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಮಂಜುನಾಥ ಸಾಲಿಮಠ ಮತ್ತಿತರರು ಮಾತನಾಡಿ ಮಸ್ಕಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರ‌್ಯಾಲಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹಾದೇವಪ್ಪಗೌಡ ಪೊ. ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರಪ್ಪ ಮೋಚಿ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ, ಬಿಜೆಪಿ ಅಧ್ಯಕ್ಷ ಮಲ್ಲಪ್ಪ ಅಂಕುಶದೊಡ್ಡಿ, ಬಿಎಸ್‌ಆರ್ ಪಕ್ಷದ ಶೇಖರಪ್ಪ ತಳವಾರ, ವರ್ತಕರ ಸಂಘದ ಅಧ್ಯಕ್ಷ ಆದಯ್ಯಸ್ವಾಮಿ ಕ್ಯಾತನಟ್ಟಿ, ಪ್ರಕಾಶ ಧಾರಿವಾಲ್, ಮಲ್ಲಪ್ಪ ಉದ್ಬಾಳ, ನಾಗಪ್ಪ ಯಂಬಲದ, ಜಗದೀಶ ತಾತಾ ಹಾಲಾಪೂರ, ಪ್ರಸನ್ನ ಪಾಟೀಲ, ವೀರೇಶ ಹೂವಿನಭಾವಿ, ದಲಿತ ಮುಖಂಡರಾದ ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರ ಒಡೆಯರ್, ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣಶೆಟ್ಟಿ ಬಣ) ಅಧ್ಯಕ್ಷ ಅಶೋಕ ಮುರಾರಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಯಣಗೌಡ ಬಣದ) ಮಲ್ಲಯ್ಯ ಮುರಾರಿ, ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಸಂದೀಪ್ ಪಾಟೀಲ, ನವ ನಿರ್ಮಾಣ ವೇದಿಕೆ ಅಧ್ಯಕ್ಷರು, ಆಟೊ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.
ಬಂದ್ ಹಿನ್ನೆಲೆಯಲ್ಲಿ ಸಿಪಿಐ ಲಕ್ಷ್ಮೀನಾರಾಯಣ, ಪಿಎಸ್‌ಐಗಳಾದ ವೆಂಕಟೇಶ ಮುರ‌್ನಾಳ, ಅಯ್ಯನಗೌಡ ಪಾಟೀಲ ನೇತೃತದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.