ADVERTISEMENT

ಮಸ್ಕಿ: ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆ ಮತ್ತೆ ವಿಳಂಬ!

ಪ್ರಜಾವಾಣಿ ವಿಶೇಷ
Published 17 ಆಗಸ್ಟ್ 2012, 5:50 IST
Last Updated 17 ಆಗಸ್ಟ್ 2012, 5:50 IST

ಮಸ್ಕಿ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಹೆಚ್ಚಿಸುವ ಮೂಲಕ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸುವ ಪ್ರಸ್ತಾಪ ಇದೀಗ ಮತ್ತೆ ನೆನೆಗುದಿಗೆ ಬಿದ್ದಿದೆ.ಆರೋಗ್ಯ ಇಲಾಖೆಯ ಖಾತೆಯನ್ನು ಹೊಂದಿರುವ ಸಚಿವ ಅರವಿಂದ ಲಿಂಬಾವಳಿ ಸದ್ಯಕ್ಕೆ ಮಸ್ಕಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಹೆಚ್ಚಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎನ್ನುವ ಮೂಲಕ ಇಲ್ಲಿಯ ಜನರ ಬಹುದಿನದ ಆಸೆಗೆ ತಣ್ಣೀರು ಎರಚಿದ್ದಾರೆ.
 
ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ಸುಮಾರು ಒಂದು ನೂರಕ್ಕೂ ಹೆಚ್ಚು ಗ್ರಾಮಗಳ ನಾಗರಿಕರು ಮಸ್ಕಿ ಸರ್ಕಾರಿ ಆಸ್ಪತ್ರೆಯನ್ನು ಅವಲಂಭಿಸಿದ್ದಾರೆ. 15 ವರ್ಷಗಳಿಂದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಹೆಚ್ಚಿಸಬೇಕು. ಇಲ್ಲಿ ಹೆರಿಗೆ ಸೌಲಭ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸುತ್ತಲೇ ಬಂದಿವೆ.

ಚುನಾವಣೆ ಸಂದರ್ಭದಲ್ಲಿ ಮೂರು ಸಾರಿ ಮಸ್ಕಿಗೆ ಆಗಮಿಸಿದ್ದ ಬಿಜೆಪಿಯ ಪ್ರಭಾವಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾವು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿಯೇ ಒಂದು ವಾರದಲ್ಲಿ ಈ ಬಗ್ಗೆ ಆದೇಶ ಹೊರಡಿಸುವ ಭರವಸೆ ನೀಡಿದ್ದರು. ಅಂದು ಆರೋಗ್ಯ ಖಾತೆಯನ್ನು ಹೊಂದಿದ್ದ ಇಂದಿನ ಬಿಎಸ್‌ಆರ್ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಸಹ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಹೆಚ್ಚಿಸುವ ಭರವಸೆ ನೀಡಿದ್ದರು. ಆದರೆ ಈ ಎಲ್ಲಾ ಭರವಸೆಗಳು ಇದೀಗ ಹುಸಿಯಾಗಿವೆ.

ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಈ ಎಲ್ಲಾ ಭರವಸೆಗಳಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಲಿಂಗಸೂಗೂರು ತಾಲ್ಲೂಕಿನಲ್ಲಿ ಎರಡು ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸಬೇಕಾಗಿತ್ತು.
 
ಇದೀಗ ಮೂರು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದರಿಂದ ಮಸ್ಕಿಯ ಈಗಿನ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಹೆಚ್ಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಇಲ್ಲಿಯ ಜನತೆಯ ಬಹುದಿನದ ಕನಸು ಕನಸಾಗಿಯೇ ಉಳಿಯಲಿದೆ. ಆಸ್ಪತ್ರೆ ಮೇಲ್ದರ್ಜೆ ಪ್ರಸ್ತಾಪ ಮತ್ತೆ ನೆನೆಗುದಿಗೆ ಬಿದ್ದಿದೆ.

ಮಾತು ಮರೆತ ಸರ್ಕಾರ: ಈ ಬಗ್ಗೆ ಪ್ರತಿಕ್ರೀಯೆ ನೀಡಿರುವ ಮಸ್ಕಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ ಚುನಾವಣೆ ಸಂದರ್ಭದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಹೆಚ್ಚಿಸುವ ಭರವಸೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ಅವರು ನಡೆದುಕೊಂಡಿಲ್ಲ ಎಂದರು.

ಮುಂಬರುವ ಚುನಾವಣೆಯಲ್ಲಿ ಇಲ್ಲಿಯ ಮತದಾರರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆಂದು ಅವರು ತಿಳಿಸಿದರು. ಮಸ್ಕಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಹೆಚ್ಚಿಸುವ ಪ್ರಸ್ತಾಪ ಇಂದು ನಿನ್ನೆಯದಲ್ಲ. 15 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದರು.ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ರೂಪಿಸಲಾಗುವುದು ಎಂದು ಅಂದಾನಪ್ಪ ಗುಂಡಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.