ADVERTISEMENT

ಮಾಚನೂರು: ಶಾಲೆಗೆ ಬೀಗಮುದ್ರೆ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 9:40 IST
Last Updated 19 ಜೂನ್ 2012, 9:40 IST

ಮಾನ್ವಿ: ತಾಲ್ಲೂಕಿನ ಮಾಚನೂರು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ 9ನೇ ತರಗತಿ ಮಂಜೂರು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಸೋಮವಾರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಗಣದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚನೂರು, ಬೊಮ್ಮನಾಳ, ಬೇವಿನೂರು, ತುಪ್ಪದೂರು, ಗಣದಿನ್ನಿ ಹಾಗೂ ಸಿಂಗಡದಿನ್ನಿ ಗ್ರಾಮಗಳ ಸುಮಾರು 40ವಿದ್ಯಾರ್ಥಿಗಳು ಉನ್ನತೀಕರಿಸಿದ ಶಾಲೆಯಲ್ಲಿ 8ನೇ ತರಗತಿ ಉತ್ತೀರ್ಣರಾಗಿದ್ದಾರೆ.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ 9ನೇ ತರಗತಿ ಮಂಜೂರು ಮಾಡಿಸಿಕೊಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲೆಯ ಎಸ್‌ಡಿಎಮ್‌ಸಿ ಪದಾಧಿಕಾರಿಗಳಿಗೆ ಈ ಹಿಂದೆ ಮೌಖಿಕವಾಗಿ ಭರವಸೆ ನೀಡಿದ್ದರು. ಕಾರಣ ಇದುವರೆಗೆ ಶಾಲೆಯ ವಿದ್ಯಾರ್ಥಿಗಳು 8ನೇ ತರಗತಿಯ ವರ್ಗಾವಣೆ ಪತ್ರ ಪಡೆದಿರುವುದಿಲ್ಲ. 

ಆದರೆ ಎಲ್ಲೆಡೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಕಾಲೇಜುಗಳು ಆರಂಭವಾಗಿ. ಆದರೆ ಮಾಚನೂರು ಗ್ರಾಮದಲ್ಲಿ 9ನೇತರಗತಿ ಆರಂಭವಾಗದೆ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಾರಣ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೂಡಲೇ 9ನೇ ತರಗತಿ ಆರಂಭಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವಿ.ಸ್ವಾಮಿ, ಈ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ಮಂಜೂರಿಗೆ ಅವಕಾಶವಿಲ್ಲ. ತಾವು ಹೊಸದಾಗಿ ತಾಲ್ಲೂಕಿಗೆ ಆಗಮಸಿದ್ದು ಶಾಲೆ ಮಂಜೂರಿಗೆ ಸಾಧ್ಯವಾಗಿಲ್ಲ. ಕಾರಣ ಈ ವರ್ಷ ಮಾಚನೂರು ಶಾಲೆಯ ವಿದ್ಯಾರ್ಥಿಗಳಿಗೆ ಬೇರೆ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಖಂಡಿತವಾಗಿ ಮಾಚನೂರು ಶಾಲೆಗೆ 9ನೇ ತರಗತಿ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಶಾಲೆಗೆ ಹಾಕಿದ ಬೀಗಮುದ್ರೆ ತೆರವುಗೊಳಿಸಿ ಪ್ರತಿಭಟನೆ ನಿಲ್ಲಿಸಿದರು.

ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನಸ್ವಾಮಿ, ಶರಣಗೌಡ ಪಾಟೀಲ್, ಈರಣ್ಣ ನಾಯಕ,  ಎಸ್‌ಡಿ ಎಮ್‌ಸಿ ಅಧ್ಯಕ್ಷ ಯಮನಪ್ಪ, ಡಾ.ಮಲ್ಲಿಕಾರ್ಜುನ, ವೀರೇಶ ಸಜ್ಜನ, ಶಂಶುದ್ದೀನ್, ಅಮರೇಶ ಅಗಸರ, ಮಲ್ಲೇಶ, ಪಂಪಾಪತಿ ನಾಯಕ, ಪರಮೇಶ, ರಮೇಶ, ಮೋದಿನ್‌ಸಾಬ, ಯಲ್ಲಪ್ಪ, ಶಂಕರಪ್ಪ, ಚೆನ್ನಪ್ಪ, ಶಂಕ್ರಯ್ಯ ಸ್ವಾಮಿ, ಅಮರೇಶ ಸಜ್ಜನ, ಬಸಯ್ಯ ಸ್ವಾಮಿ, ಶಿವಪ್ಪ  ಸೇರಿದಂತೆ ಎಸ್‌ಡಿಎಮ್‌ಸಿಯ ಪದಾಧಿಕಾರಿಗಳು ಹಾಗೂ ಮಾಚನೂರು ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.