ADVERTISEMENT

ಮಾದಿಗ ಮೀಸಲಾತಿ ಹೋರಾಟ ಸಮಿತಿ ಧರಣಿ

ಸದಾಶಿವ ಆಯೋಗ ವರದಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:47 IST
Last Updated 17 ಸೆಪ್ಟೆಂಬರ್ 2013, 6:47 IST

ರಾಯಚೂರು: ಒಳ ಮೀಸಲಾತಿಗೆ ಸಂಬಂಧ­ಪಟ್ಟಂತೆ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ಕೊಟ್ಟಿರುವ ವರದಿಯನ್ನು ಸದನದಲ್ಲಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡ­ಬೇಕು, 10,450 ಜನ ಗ್ರಾಮ ಸಹಾ­ಯಕರನ್ನು ಡಿ ಗ್ರೂಪ್‌ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕವು ಇಲ್ಲಿನ ತಹಸೀಲ್ದಾರ ಕಚೇರಿ ಮುಂದೆ ಧರಣಿ ಮಾಡಿತು.

ಸಂಘಟನೆ ರಾಜ್ಯ ಘಟಕವು ನೀಡಿದ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಹಸೀಲ್ದಾರ ಕಚೇರಿ ಎದುರು ಧರಣಿ ಮಾಡಲಾಗುತ್ತಿದೆ. ರಾಜ್ಯವ್ಯಾಪಿ ಈ ಪ್ರತಿಭಟನೆ ಸಂಘಟನೆ ಮಾಡುತ್ತಿದೆ. ಈಗ ಧರಣಿ ಮೂಲಕ ಒತ್ತಾಯಿ­ಸುತ್ತಿರುವ ಬೇಡಿಕೆಗಳು ಅನೇಕ ದಿನಗಳದ್ದು. ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಪ್ರತಿ ತಾಲ್ಲೂಕು ಕಚೇರಿ ಮುಂದೆ ಈ ರೀತಿ ಧರಣಿ ಮಾಡಬೇಕಾ­ಗಿದೆ ಎಂದು ಸಂಘಟನೆ ಗುಲ್ಬರ್ಗ ವಿಭಾಗೀಯ ಅಧ್ಯಕ್ಷ ಕೆ.ಎಸ್‌ ನಾಗರಾಜ ಹೇಳಿದರು.

ಭೂ ಹೀನ ಮಾದಿಗರಿಗೆ ಒಂದು ಕುಟುಂಬಕ್ಕೆ 4 ಎಕರೆ ಭೂಮಿ ಮಂಜೂರ ಮಾಡಬೇಕು, ವಿದ್ಯಾವಂತ ಮಾದಿಗರಿಗೆ ಉದ್ಯೋಗ ಕೊಡಬೇಕು, ಮಾದಿಗ ನಿರುದ್ಯೋಗಿಗಲಿಗೆ ನಿರು­ದ್ಯೋಗ ಭತ್ಯೆ ಮಂಜೂರ ಮಾಡಬೇಕು, ಮಾದಿಗರ ಅಕ್ರಮ ಜಮೀನು ಸಕ್ರಮ­ಗೊಳಿಸಬೇಕು, ಮಾದಿಗರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಬೇಕು, ಪೌರ ಕಾರ್ಮಿಕರನ್ನು ಕಾಯಂಗೊಳಿ­ಸಬೇಕು, ಗುತ್ತಿಗೆ ಪದ್ಧತಿ ರದ್ದುಪಡಿಸ­ಬೇಕು, ಎಲ್ಲ ಇಲಾಖೆಯಲ್ಲಿನ ದಿನ­ಗೂಲಿ, ಸಫಾಯಿ ಕರ್ಮಚಾರಿಗಳ ಮತ್ತು ಅರೆಕಾಲಿಕ ನೌಕರರ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಚರ್ಮ ಕುಶಲ ಕರ್ಮಿ ಕೆಲಸಗಾರ­ರಿಗೆ ವಿಶೇಷ ಸಾಲ ಸೌಲಭ್ಯ ಕಲ್ಪಿಸಬೇಕು, ಜಿಲ್ಲೆಯ ರಾಯಚೂರು ತಾಲ್ಲೂಕು ಗಾಣಧಾಳ, ಸಿಂಧನೂರು ತಾಲ್ಲೂಕಿನಲ್ಲಿ ಮಾದಿಗ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಂಥ ದೌರ್ಜನ್ಯ ತಡೆಗಟ್ಟಬೇಕು ಎಂದು ಒತ್ತಾಯ ಮಾಡಿದರು.

ಆರೋಗ್ಯಪ್ಪ ಪನ್ನೂರು, ರಾಘವೇಂದ್ರ ಬೋರೆಡ್ಡಿ, ಶಿವರಾಜ ಹೊಸಪೇಟೆ, ಹನುಮಂತ ಅಕ್ಕರಕಿ, ಆಂಜನೇಯ ಕುರುದೊಡ್ಡಿ, ಶರಣಪ್ಪ ಮ್ಯಾತ್ರಿ, ಶಿವಶಂಕರ, ಚಂದ್ರಶೇಖರ ಭಂಡಾರಿ, ಎ ಸೋಮಶೇಖರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.