ADVERTISEMENT

ಮಾನ್ವಿ: ಬಂದ್‌ಗೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 6:55 IST
Last Updated 7 ಅಕ್ಟೋಬರ್ 2012, 6:55 IST

ಮಾನ್ವಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ಶನಿವಾರ ನೀಡಿದ್ದ `ಕರ್ನಾಟಕ ಬಂದ್~ ಕರೆಗೆ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. 

 ಬೆಳಿಗ್ಗೆಯಿಂದಲೇ ಬಹುತೇಕ ವಾಣಿಜ್ಯ ಮಳಿಗೆಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ವ್ಯಾಪಾರ, ವಹಿವಾಟು ಎಂದಿನಂತೆ ಈ ದಿನವೂ ಕೂಡ ಸಾಮಾನ್ಯವಾಗಿತ್ತು. ಶಾಲಾ ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಸಾಮಾನ್ಯ ದಿನಗಳಂತೆ ಕಾರ್ಯನಿರ್ವಹಿಸಿದವು. 

 ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹೊರತುಪಡಿಸಿ ಬಹುತೇಕ  ಕನ್ನಡಪರ ಸಂಘಟನೆಗಳ ತಾಲ್ಲೂಕು ಘಟಕಗಳು  ಮೌನಕ್ಕೆ ಶರಣಾಗಿದ್ದು ಸಾರ್ವಜನರಿಕರಲ್ಲಿ ಅಚ್ಚರಿಗೆ ಕಾರಣವಾಯಿತು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು `ಕರ್ನಾಟಕ ಬಂದ್~ ಕರೆಗೆ ಸಾಂಕೇತಿಕ ಬೆಂಬಲ ವ್ಯಕ್ತಪಡಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. 

  ಪ್ರಸ್ತುತ ಕಾವೇರಿ ಜಲಾಶಯದಲ್ಲಿರುವ ನೀರಿನ ಪ್ರಮಾಣ ಆ ಭಾಗದ ಜನತೆಗೆ ಕುಡಿಯಲು ಮತ್ತು ಬೆಳೆದು ನಿಂತ ಬೆಳೆಗಳಿಗೆ ಮಾತ್ರ ಸಾಕಾಗುತ್ತದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಪ್ರಧಾನಮಂತ್ರಿಗಳು ಆದೇಶ ನೀಡಿರುವುದು ಖಂಡನೀಯವಾಗಿದೆ. ಕಾರಣ ಪ್ರಧಾನಿಯವರು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕಸಾಪ ತಾಲ್ಲೂಕು ಅಧ್ಯಕ್ಷ ತಾಯಪ್ಪ ಬಿ.ಹೊಸೂರು, ಗೌರವಾಧ್ಯಕ್ಷ ಶ್ರೀಶೈಲಗೌಡ, ಪದಾಧಿಕಾರಿಗಳಾದ ಕೆ.ಈ.ನರಸಿಂಹ, ರಮೇಶಬಾಬು ಯಾಳಗಿ, ಎಚ್.ಟಿ.ಪ್ರಕಾಶಬಾಬು, ಲಕ್ಷ್ಮಣ ಜಾನೇಕಲ್, ಶ್ರೀಶೈಲ್ ಕಂಬಾರ, ಎಂ.ಎಂ.ಹಿರೇಮಠ, ಶಾಂತಯ್ಯ ಸ್ವಾಮಿ, ಕೆಮ್ಯಾನಾಯಕ, ಮಹಾಂತೇಶ, ಶರಣಪ್ಪ, ಕೆ.ಎಂ.ಬಾಷ, ಸಿ.ಎಂ.ನರಸಿಂಹ. ಸುಪ್ರಿಯಾ ಮುಂತಾದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.