ರಾಯಚೂರು: ನಗರದ ಹೃದಯ ಭಾಗದಲ್ಲಿರುವ ಮಾವಿನಕೆರೆ ಮಲಿನ ನೀರಿನ ತಾಣವಾದರೂ ಜನರಿಗೆ ಆಕರ್ಷಣೆಯ ಸ್ಥಳ.
ವಿಸ್ತಾರವಾಗಿ ಚಾಚಿಕೊಂಡಿರುವ ಮಾವಿನ ಕೆರೆಯ ಒಂದು ಮಗ್ಗುಲಲ್ಲಿ ಮಾತ್ರ ಸಾರ್ವಜನಿಕರಿಗೆ ಅನುಕೂಲಗಳಿವೆ. ಉದ್ಯಾನ, ಕೆರೆಯ ಏರಿ ಮೇಲೆ ಪಾದಚಾರಿ ಮಾರ್ಗ ಇದೆ. ನಿತ್ಯ ಇಲ್ಲಿ ನೂರಾರು ಜನರು ವಾಯು ವಿಹಾರ ಮಾಡುತ್ತಾರೆ.
ಜೊತೆಗೆ ವಾರಾಂತ್ಯದಲ್ಲಿ ಹೆಚ್ಚಿನ ಜನರು ಉದ್ಯಾನಕ್ಕೆ ಭೇಟಿ ನೀಡಿ ಕೆಲವು ಸಮಯ ಕಳೆಯುತ್ತಾರೆ. ಆದರೆ, ಕೆರೆಯ ಇತರ ಭಾಗಗಳಲ್ಲಿ ಇಂತಹ ಈ ಅವಕಾಶ ಇಲ್ಲ. ಈಗ ನಗರಸಭೆಯು ಉರಿಕುಂದಿ ಈರಣ್ಣ ದೇವಾಲಯ ರಸ್ತೆಗೆ ಹೊಂದಿಕೊಂಡಿರುವ (ಖಾಸ ಬಾವಿ ಎದುರು) ಕೆರೆಯ ಏರಿ ಮೇಲೆ ಸಿಮೆಂಟ್ ಬೆಂಚುಗಳನ್ನು ಹಾಕಿಸಿ ನಾಗರಿಕರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ.
ಈ ಜಾಗ ಕಟ್ಟಡಗಳ ಅವಶೇಷ ಮತ್ತು ತ್ಯಾಜ್ಯಗಳನ್ನು ಸುರಿಯುವ ತಾಣವಾಗಿತ್ತು. ಕೆರೆಯ ಭಾಗ ಇತರೆಡೆ ಒತ್ತುವರಿಯಾದಂತೆ ಇಲ್ಲೂ ಒತ್ತುವರಿ ಆಗುತ್ತದೆ ಎಂಬ ಗುಮಾನಿ ಜನರಲ್ಲಿ ಉಂಟಾಗಿತ್ತು. ಈ ಸಂಶಯವನ್ನು ಹೋಗಲಾಡಿಸಲು ಮತ್ತು ಕೆರೆಯನ್ನು ಸಂರಕ್ಷಿಸಲು ನಗರಸಭೆಯಿಂದ ಈ ಬೆಂಚುಗಳನ್ನು ಹಾಕಲಾಗಿದೆ.
₹ 6 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಯೂ ನಡೆಯುತ್ತಿದೆ. 500 ಚದರ ಮೀಟರ್ ಇಂಟರ್‌ಲಾಕ್ ಟೈಲ್ಸ್‌ನ ಪಾದಚಾರಿ ಮಾರ್ಗದ ನಿರ್ಮಾಣ ಆಗುತ್ತಿದ್ದು, 15 ಕಡೆ ಸಿಮೆಂಟ್ ಬೆಂಚ್‌ಗಳನ್ನು ಹಾಕಲಾಗುತ್ತದೆ. ಸದ್ಯ 10 ಕಡೆ ಬೆಂಚ್‌ಗಳ ಅಳವಡಿಕೆ ಆಗಿದೆ.
‘ಖಾಸ ಭಾವಿ ಎದುರು ಬೆಂಚುಗಳನ್ನು ಹಾಕಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಈ ಇದು ಹಾಳಾಗದಂತೆ ಬೇಲಿಯನ್ನೂ ಹಾಕ ಬೇಕು. ಆಗ ದನಕರುಗಳು, ಹಂದಿ– ನಾಯಿಗಳು ನುಗ್ಗಿ ಹೊಲಸು ಮಾಡುವುದು ತಪ್ಪುತ್ತದೆ’ ಎಂದು ಕೋಟೆ ಪ್ರದೇಶದ ನಿವಾಸಿ ಸುಧೀಂದ್ರ ಹೇಳಿದರು.
‘ಬೆಂಚುಗಳನ್ನು ಹಾಕಿದ್ದು ಚಲೋ ಕಾರ್ಯವೇ ಆದರೆ, ದುರ್ವಾಸನೆ, ಸೊಳ್ಳೆಗಳ ಕಾಟವನ್ನು ಹೋಗಲಾಡಿ ಸಿದರೆ ಮಾತ್ರ ಇದು ಜನರ ಉಪ ಯೋಗಕ್ಕೆ ಹಚ್ಚು ಬರುತ್ತದೆ’ ಎಂದು ಜಬೀನ್ ಬೀ ನುಡಿದರು.
‘ಕೆರೆ ಏರಿಗೆ ಹಸಿರುಹುಲ್ಲಿನ ಹೊದಿಕೆ (ಗ್ರೀನ್ ಲಾನ್), ತಂತಿ ಬೇಲಿ ಹಾಕಿಸಿ ಗೇಟ್ ಕೂಡ ಅಳವಡಿಸಲಾಗುವುದು. ಇನಷ್ಟು ವಿದ್ಯುತ್ ದೀಪಗಳನ್ನು ಹಾಕಿ ಸುವ ಕಾಮಗಾರಿಗಳು ನಡೆಯಲಿವೆ’ ಎಂದು 9ನೇ ವಾರ್ಡ್‌ನ ಸದಸ್ಯ ನರಸಪ್ಪ ಯಾಕ್ಲಾಸಪುರ ಹೇಳಿದರು.
‘ಖಾಸ ಭಾವಿ ಎದುರಿನ ಮಾವಿನಕೆರೆ ಏರಿ ಮೇಲೆ ಮಣ್ಣು ಸುರಿಯಲಾಗುತ್ತಿತ್ತು. ಕೆರೆ ಏರಿ ಒತ್ತುವರಿ ಆಗುತ್ತದೆ ಎಂಬ ಆತಂಕ ಜನರಲ್ಲಿ ಮೂಡಿತ್ತು. ಸಿಮೆಂಟ್‌ನ ಬೆಂಚ್‌ಗಳನ್ನು ಹಾಕಿ ಜನೋಪಯೋಗಿ ಕೆಲಸ ಮಾಡಲಾಗಿದೆ.’ ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ತಿಳಿಸಿದರು.
***
ಕೆರೆ ಏರಿ ಮೇಲೆ ವೇದಿಕೆಯೊಂದನ್ನು ನಿರ್ಮಿಸಲಾಗಿದೆ. ಜಿಲ್ಲಾಡಳಿತ ಅನುಮತಿ ನೀಡಿದರೆ, 60ಅಡಿ ಎತ್ತರದ ಸ್ತಂಭ ಸ್ಥಾಪಿಸಿ ರಾಷ್ಟ್ರಧ್ವಜ ಅರಳಿಸುವ ಯೋಚನೆ ಇದೆ.
-ನರಸಪ್ಪ ಯಾಕ್ಲಾಸಪುರ,ನಗರಸಭೆಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.